

ಗೋಕರ್ಣ: ಹತ್ತಿರದ ಹಿರೇಗುತ್ತಿಯ ಶ್ರೀದೇವಕಿಕೃಷ್ಣ ಶ್ರೀಮಹಾಲಕ್ಷ್ಮೀ ರವಳನಾಥ ಮಂದಿರದಲ್ಲಿ ಮಾ. 12ರಿಂದ ಮಾ.17ರವರೆಗೆ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ಸಹಸ್ರ ಕುಂಭಾಭಿಷೇಕ ಮಹೋತ್ಸವ ಆಯೋಜಿಸಲಾಗಿದೆ.
ಮಾ. 12ರಂದು ಮುಂಜಾನೆ ಕಾಗಾಲ ಗ್ರಾಮದ ಶ್ರೀದೇವಕಿಕೃಷ್ಣ ಸನ್ನಿಧಾನದಲ್ಲಿ ಸೇವೆ ಮತ್ತು ಪ್ರಾರ್ಥನೆ ಮುಖೇನ ಮಹೋತ್ಸವ ಪ್ರಾರಂಭವಾಗುವುದು. ಸಂಜೆ 6-30ಕ್ಕೆ ಶ್ರೀವಿದ್ಯಾಧೀಶತೀರ್ಥ ಶ್ರೀಗಳ ಆಗಮನವಾಗಲಿದ್ದು, ಮೊರಬಾದ ಶ್ರೀಲಕ್ಷ್ಮೀನಾರಾಯಣ ಮಂದಿರದಿಂದ ಪುಷ್ಪಾಲಂಕೃತ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ಶ್ರೀಮಂದಿರಕ್ಕೆ ಕರೆತರಲಾಗುವುದು. ನಂತರ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಆಶೀರ್ವಚನ, ನಂತರ ಪ್ರಸಾದ ಭೋಜನ ಏರ್ಪಡಿಸಲಾಗಿದೆ.
ಮಾ.13ರಿಂದ ಮಾ.15ರ ತನಕ ನಿತ್ಯ ಬೆಳಗ್ಗೆ ವಿವಿಧ ಧಾರ್ಮಿಕ ಮತ್ತು ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 16ರಂದು ಮುಂಜಾನೆ 9 ಗಂಟೆಗೆ ಶ್ರೀಗಳಿಂದ ಸಹಸ್ರ ಕುಂಭಾಭಿಷೇಕ ಮತ್ತು ಪೂರ್ಣಾಹುತಿ ನಡೆಯುವುದು. 17ರಂದು ಧಾರ್ಮಿಕ ಕಾರ್ಯಗಳು ಮತ್ತು ಮಧ್ಯಾಹ್ನ ಯತಿಭಿಕ್ಷಾ ಸೇವೆ, ಸಮಾರಾಧನೆ ಹಾಗೂ ಶ್ರೀಗುರು ಪಾದ್ಯಪೂಜೆ ಏರ್ಪಾಟಾಗಿದೆ. ಸಂಜೆ 4 ಗಂಟೆಗೆ ಶ್ರೀಗಳಿಂದ ಆಶೀರ್ವಾದ ಮತ್ತು ಫಲ ಮಂತ್ರಾಕ್ಷತೆ ನಡೆಯುವುದು ಎಂದು ಮಂದಿರದ ಆಡಳಿತ ಮಂಡಳಿ ಮತ್ತು ಸಹಸ್ರ ಕುಂಭಾಭಿಷೇಕ ಸಮಿತಿ ತಿಳಿಸಿದೆ.