

ಉಡುಪಿ: ಭಾರತೀಯ ರಂಗಕಲೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ)ಯ ವಾರಣಾಸಿ ಕೇಂದ್ರದ 20 ಮಂದಿ ವಿದ್ಯಾರ್ಥಿಗಳು 25 ದಿನದ ಯಕ್ಷಗಾನ ಅಭ್ಯಾಸಕ್ಕಾಗಿ ಉಡುಪಿಗೆ ಆಗಮಿಸಿದ್ದು, ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಬನ್ನಂಜೆ ಸಂಜೀವ ಸುವರ್ಣ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ವಾರಣಾಸಿ ಕೇಂದ್ರದ 11 ಮಂದಿ ಹುಡುಗರು ಮತ್ತು 9 ಮಂದಿ ಹುಡುಗಿಯರು ತಮ್ಮ 1 ವರ್ಷದ ಡಿಪ್ಲೊಮಾ ಪದವಿಯ ಭಾಗವಾಗಿ ಯಕ್ಷಗಾನ ಕಲಿಯುತ್ತಿದ್ದು, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ. ಅದಮಾರು ಮಠ ಅತಿಥಿಗೃಹದಲ್ಲಿ ತರಗತಿಗಳು ನಡೆಯುತ್ತಿದ್ದು, ಜೂನ್ 4ರಿಂದ ಯಕ್ಷಗಾನದ ವಿವಿಧ ಪ್ರಾಕಾರಗಳನ್ನು ಕಲಿಸಲಾಗುತ್ತಿದೆ.
ವಿದ್ಯಾರ್ಥಿಗಳು ರಾಗ, ತಾಳಗಳು, ಪೂರ್ವರಂಗವನ್ನು ಸಂಸತ ಮತ್ತು ಹಿಂದಿ ಭಾಷೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಶ್ರೀಮಂತ ಕಲೆಯ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದಾರೆ. ಈಗಾಗಲೇ ಯಕ್ಷಗಾನದ ಸುಮಾರು 15 ರಾಗಗಳನ್ನು ಕಲಿತಿದ್ದಾರೆ. ಸಂಗೀತ, ನೃತ್ಯ ಇತ್ಯಾದಿಗಳ ಬಗ್ಗೆ ತಳಸ್ಪರ್ಷಿ ಜ್ಞಾನ ಹೊಂದಿರುವ ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ಚೆನ್ನಾಗಿ ಅಭ್ಯಸಿಸುತ್ತಿದ್ದಾರೆ ಎಂದು ಗುರು ಸಂಜೀವ ಸುವರ್ಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದಿನವಿಡೀ ಅಭ್ಯಾಸ
ಯಕ್ಷಗಾನದ ಜೊತೆಗೆ ಮುಂಜಾನೆ ಯೋಗ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ 5ರಿಂದ ದಿನಚರಿ ಪ್ರಾರಂಭವಾಗುತ್ತಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ತರಗತಿಗಳು ನಡೆಯುತ್ತವೆ. ಅಪರಾಹ್ನ 3ರಿಂದ 5ರ ವರೆಗೆ ಪುನರಾವರ್ತನೆ ಮಾಡಿಸಲಾಗುತ್ತದೆ. ಯಕ್ಷಗಾನ ಕಲಿಕೆಯಲ್ಲಿ ಭಾಗವತ ಪ್ರಸಾದ್ ಮುದ್ರಾಡಿ ಮತ್ತು ಶ್ರೀಧರ ಹೆಗಡೆ ಮದ್ದಳೆಯಲ್ಲಿ ಸಹಕರಿಸುತ್ತಿದ್ದಾರೆ.
25, 26ರಂದು ಪ್ರದರ್ಶನ
ಯಕ್ಷಗಾನ ತರಬೇತಿಯಲ್ಲಿ "ಏಕಲವ್ಯ' ಹಿಂದಿ ಯಕ್ಷಗಾನವನ್ನು ಅಭ್ಯಸಿಸಿದ್ದು, ಮೂಲತ@ ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗವನ್ನು ಶೋಭಾ ಆರ್. ತಂತ್ರಿ ಮತ್ತು ಪ್ರಭಾತಾ ಪಾಟೀಲ್ ಹಿಂದಿಗೆ ಅನುವಾದಿಸಿದ್ದಾರೆ. 25ರಂದು ಪೂರ್ಣಪ್ರಜ್ಞ ಸಭಾಂಗಣದಲ್ಲಿ ಹಾಗೂ 26ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.