ಜಿಲ್ಲೆಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

shivagange honnadevi
Published on

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಮಹಿಳೆಯರಿಗೆ ಬಾಗೀನ ಅರ್ಪಣೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶ್ರಾವಣ ಶುಭ ಶುಕ್ರವಾರ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಬ್ಬಕ್ಕೆ ಎರಡು ದಿನ ಇರುವಂತೆಯೇ ನಗರ, ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಕಂಡುಬಂದ ಜನಜಂಗುಳಿ ಹಬ್ಬದ ದಿನ ಮುಂಜಾನೆಯೂ ಕರಗಿರಲಿಲ್ಲ. ಹಬ್ಬದ ಸಾಮಾಗ್ರಿ ಖರೀದಿಗೆ ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡುಬಂತು.
ಜಿಲ್ಲೆಯ ಪ್ರಸಿದ್ಧ ದೇಗುಲಗಳಾದ ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯ ಶಿವಗಂಗೆ, ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ, ಮಧುರೆ ಹೋಬಳಿಯ ಶ್ರೀ ಶನೈಶ್ಚರ ದೇಗುಲ ಸೇರಿ ಹಲವು ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಲಕ್ಷ್ಮೀ ಪೂಜೆ ಅದ್ದೂರಿ ನಗರ, ಪಟ್ಟಣ ಪ್ರದೇಶ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ಲಕ್ಷ್ಮೀ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಲಕ್ಷ್ಮೀ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ತರಹೇವಾರಿ ಹೂಗಳಿಂದ ಸಿಂಗರಿಸಿ ದೇವಿಯ ಆರಾಧನೆ ಮಾಡಲಾಯಿತು. ಲಕ್ಷ್ಮೀ ಪೂಜೆಗೆ ಬಂಧು-ಸ್ನೇಹಿತರನ್ನು ಕರೆದು ಅರಿಶಿಣ, ಕುಂಕುಮ, ಬಾಗೀನ ನೀಡಿ ಹಬ್ಬದ ಶುಭಾಯಶ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವು ಕಡೆಗಳಲ್ಲಿ ಲಕ್ಷ್ಮೀ ದೇವಿಗೆ ನೋಟು ಹಾಗೂ ನಾಣ್ಯಗಳ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ತಳಿರು ತೋರಣ, ವಿದ್ಯುತ್ ಅಲಂಕಾರದಿಂದ ಸಿಂಗಾರ ಮಾಡಲಾಗಿತ್ತು. ದೇಗುಲಗಳ ಬಳಿ ಮುಂಜಾನೆಯಿಂದಲೇ ಜಮಾಯಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸವಿದರು.

ಘಾಟಿಯಲ್ಲಿ ಮಹಿಳೆಯರಿಗೆ ಬಾಗೀನ ಜಿಲ್ಲೆಯಲ್ಲಿ ಪ್ರಸಿದ್ಧ ಕ್ಷೇತ್ರವಾಗಿರುವ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮಹಿಳಾ ಭಕ್ತರಿಗೆ ಅರಿಶಿಣ-ಕುಂಕುಮ ಹಾಗೂ ಬಳೆಯ ಬಾಗೀನ ನೀಡಿ ಹಬ್ಬದ ಶುಭಾಶಯ ಕೋರಲಾಯಿತು. ದೇವಾಲಯದ ಕಾರ್ಯನಿರ್ವಾಹಣ ಅಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಮಹಿಳೆಯರಿಗೆ ಬಾಗೀನ ಅರ್ಪಿಸಲಾಯಿತು. ಶುಕ್ರವಾರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಹಬ್ಬದ ಪ್ರಯುಕ್ತ ಭಕ್ತರಿಗೆ ವಿಶೇಷ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಲಕ್ಷ್ಮೀ ದೇವಿಗೆ ನಾಣ್ಯಗಳ ಸಿಂಗಾರ ದೊಡ್ಡಬಳ್ಳಾಪುರದ ಕನಕದಾಸನಗರದಲ್ಲಿನ ಶ್ರೀ ಲಕ್ಷ್ಮೀ ದೇಗುಲದಲ್ಲಿ ವಿಶೇಷವಾಗಿ ನಾಣ್ಯಗಳ ಅಲಂಕಾರ ನೆರವೇರಿಸಲಾಯಿತು. ಪಂಚಾಮೃತಹೋಮ ಸೇರಿ ವಿವಿಧ ಹೋಮ-ಹವನಗಳನ್ನು ನಡೆಸಲಾಯಿತು. ಮಹಿಳೆಯರ ತಂಡದಿಂದ ಲಲಿತಾ ಸಹಸ್ರನಾಮಪಾರಾಯಣ ನೆರವೇರಿತು.

ಶಿವಗಂಗೆಯಲ್ಲಿ ವಿಶೇಷ ಪೂಜೆ ದಕ್ಷಿಣಕಾಶಿ ಶಿವಗಂಗೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಪೂಜೆ ಬಳಿಕ ಮಹಿಳೆಯರಿಗೆ ಅರಿಶಿಣ-ಕುಂಕುಮ ಹಾಗೂ ಬಳೆಗಳ ಬಾಗೀನ ನೀಡುವ ಸಂಪ್ರದಾಯ ನೆರವೇರಿಸಲಾಯಿತು. ಎರಡು ವರ್ಷದಿಂದ ಆರಂಭವಾದ ಸಂಪ್ರದಾಯ ಈ ಬಾರಿಯೂ ಮಹಿಳಾ ಭಕ್ತರಿಗೆ ದೇಗುಲದ ವತಿಯಿಂದ ಬಾಗೀನ ನೀಡಲಾಯಿತು. ಹಲವು ಕಡೆಗಳಲ್ಲಿ ಮಹಿಳೆಯರಿಂದ ಭಜನೆ, ವರವಹಾಲಕ್ಷ್ಮೀ ಕುರಿತಾದ ಗೀತಗಾಯನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net