

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವರಮಹಾಲಕ್ಷ್ಮೀ ಹಬ್ಬದ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗಿದೆ, ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿ ಜೋರಾಗಿದೆ. ಬೆಲೆ ಏರಿಕೆ ನಡುವೆಯೂ ಗ್ರಾಹಕರು ಹಬ್ಬದ ಸಾಮಗ್ರಿ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡುಬರುತ್ತಿದೆ.
ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ ಲಕ್ಷ್ಮೀಗೆ ಪ್ರಿಯವಾದ ತಾವರೆ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ಇದರೊಂದಿಗೆ ಲಕ್ಷ್ಮೀದೇವಿಯ ಸಿದ್ಧ ವಿಗ್ರಹಗಳ ಮಾರಾಟವೂ ಜೋರಾಗಿದೆ. ಮನೆಗಳಲ್ಲಿ ವರಮಹಾಲಕ್ಷ್ಮೀ ವಿಗ್ರಹ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯದ ಹಿನ್ನೆಲೆಯಲ್ಲಿ ತರಹೇವಾರಿ ವಿಗ್ರಹಗಳ ಪ್ರದರ್ಶನ ಮಾರಾಟ ಕಂಡುಬರುತ್ತಿದೆ. ಮಾರುಕಟ್ಟೆಗಳಲ್ಲಿ ಲೋಡ್‌ಗಟ್ಟಲೆ ಬಾಳೆದಿಂಡು ಮಾರಾಟಕ್ಕಿಟ್ಟಿದ್ದಾರೆ.
ಬೆಲೆ ಏರಿಕೆ ಬಿಸಿ: ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೂವು- ಹಣ್ಣುಗಳ ದರ ಗಗನಕ್ಕೇರಿಗೆ. ದರ ಗ್ರಾಹಕರ ಜೇಬು ಸುಡುತ್ತಿದ್ದರೂ ಗ್ರಾಹಕರು ಉತ್ಸಾಹದಿಂದಲೇ ಹಬ್ಬದ ಸಾಮಗ್ರಿ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಅದರಲ್ಲೂ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗ್ರಾಹಕರು ಕಂಡುಬರುತ್ತಿದ್ದಾರೆ. ಜಿಲ್ಲೆಯಲ್ಲಿನ ದೇಗುಲಗಳಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದು, ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಲು ಸಜ್ಜಾಗಿರುವ ದೃಶ್ಯ ಕಂಡಬರುತ್ತಿದೆ.
ಗಗನಕ್ಕೇರಿದ ಹಣ್ಣುಗಳ ಬೆಲೆ: (ಪ್ರತಿ ಕೆಜಿಗೆ) ಆಪಲ್ 200 ರೂ., ಯಾಲಕ್ಕಿ ಬಾಳೆ 120 ರೂ., ಪಚ್ಚಬಾಳೆ 40 ರೂ., ಮೂಸಂಬಿ 80 ರೂ., ಕಿತ್ತಲೆ 150 ರೂ., ದಾಳಂಬೆ 160, ಸೀಡ್ ಲೆಸ್ ದ್ರಾಕ್ಷಿ 200, ಪೈನ್ ಆಪಲ್ ಜೋಡಿ 150 ರೂ. ಬೆಲೆಯಾಗಿದ್ದರೆ, ಹೂವಿನ ಬೆಲೆಯೂ ಸಹ ಗಗನಕ್ಕೇರಿದೆ, (ಪ್ರತಿ ಕೆಜಿಗೆ) ಮಲ್ಲಿಗೆ 1000 ರೂ., ಬಿಳಿ ಶಾಮಂತಿಗೆ 400 ರೂ., ಹಳದಿ ಶಾಮಂತಿಗೆ 300 ರೂ., ರೋಜಾ ಹೂವು 250 ರೂ., ತಾವರೆ ಹೂವು 2ಕ್ಕೆ 250 ರೂಪಾಯಿಗಳಾಗಿದ್ದು, ಜೋಡಿ ಬಾಳೆ ದಿಂಡು 150 ರೂಗೆ ಮಾರಾಟವಾಗುತ್ತಿದ್ದು, ಗುರುವಾರ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಟ್ರಾಫಿಕ್ ಜಾಮ್: ನಗೆರ ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಹೂ ಹಣ್ಣು ಮಾರಾಟ ಜೋರಾಗಿದ್ದು ಬುಧವಾರ ಸಂಜೆ ಎಲ್ಲೆಡೆ ವಾಹನ ದಟ್ಟಣೆ ಕಂಡುಬಂತು. ಪಾದಚಾರಿ ಮಾರ್ಗಗಳಲ್ಲೂ ವ್ಯಾಪಾರಸ್ಥರು ಬೀಡು ಬಿಟ್ಟಿದ್ದರಿಂದ ಜನ ಸಂಚಾರಕ್ಕೂ ತೊಡಕಾಯಿತು. ಆದರೂ ಹಬ್ಬದ ಸಾಮಾಗ್ರಿ ಖರೀದಿಯಲ್ಲಿ ಬಿಜಿಯಾಗಿದ್ದ ಗ್ರಾಹಕರಿಗೆ ಟ್ರಾಫಿಕ್ ಕಿರಿಕಿರಿ ಎನಿಸದಂತ ಮುಖಭಾವ ಕಂಡುಬಂತು.