

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಒಕ್ಕೂಟದ ಪದಗ್ರಹಣ ಸಮಾರಂಭ ಮತ್ತು ಸಾಮಾಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಜರುಗಿತು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಸ್ವಸಹಾಯ ಸಂಘಗಳು ಬಲಗೊಳ್ಳಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಸಾಗಬೇಕು. ವರಮಹಾಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದ ಸಮಾಜವು ಅಭಿವೃದ್ಧಿ ಹೊಂದಲಿ ಎಂದು ಪಾರ್ಥಿಸುವೆ ಎಂದು ಹೇಳಿದರು.
ಶ್ರೀ ಕ್ಷೇತ್ರದ ಜಿಲ್ಲಾ ನಿರ್ದೇಶಕಿ ಚೇತನಾ ಮಾತನಾಡಿ, ಕುಟುಂಬದಲ್ಲಿನ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ದೇವರ ಮೊರೆ ಹೋಗಲು ಈ ಪೂಜೆ ನೆರವೇರಿಸುತ್ತಿದ್ದೇವೆ, ಮನೆಯಲ್ಲಿ ಶಾಂತಿ ನೆಲೆಸಲಿ ಎಂಬುವುದರಿಂದ ಪ್ರಾರ್ಥನೆ ಮಾಡಲಾಗುವುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ನಮ್ಮ ಶ್ರೀಕ್ಷೇತ್ರದಿಂದ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಆಗುವ ಪ್ರಯೋಜನಗಳನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮಾಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರು ಭಾಗವಹಿಸಿ ಗಮನ ಸೆಳೆದರು. ನಂತರ ಒಕ್ಕೂಟದ ಪದಗ್ರಹಣ ಸಮಾರಂಭವು ನಡೆಯಿತು.