ಜಿಲ್ಲೆಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಪೂಜೆ, ವ್ರತಾಚರಣೆ ಮಾಡಿ ವರವ ಬೇಡಿದ ಭಕ್ತರು

Screenshot_20240816-224008_1.jpg
Published on

ಹುಬ್ಬಳ್ಳಿ: ಬೇಡಿದ್ದನ್ನು ಕರುಣಿಸುವ, ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ದೇವಿ ಶ್ರೀ ವರ ಮಹಾಲಕ್ಷ್ಮೀ ವ್ರತವನ್ನು ಧಾರವಾಡ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಎರಡನೇ ಶುಕ್ರವಾರ ಎಲ್ಲೆಡೆ ಅದ್ದೂರಿಯಾಗಿ ನಡೆಯುವ ವರಮಹಾಲಕ್ಷ್ಮೀ ಮಹಾಪೂಜೆಯು ಧಾರವಾಡ ಜಿಲ್ಲೆಯಲ್ಲಿಯೂ ವಿಜೃಂಭಣೆಯಿಂದ ನೆರವೇರಿತು. ಅನೇಕ ಜನರು ತಮ್ಮ ಮನೆಮನೆಗಳಲ್ಲಿಯೂ ಮಹಾಲಕ್ಷ್ಮೀಯ ವ್ರತ ಕೈಗೊಂಡು, ಆರಾಧನೆ ಮಾಡಿದರು. ಮಹಿಳೆಯರು, ಮಕ್ಕಳು ಸಂಭ್ರಮದಿಂದ ಹಬ್ಬ ಆಚರಿಸಿದರು.

ವರಮಹಾಲಕ್ಷ್ಮೀ ಪೂಜೆಗಾಗಿ ಮನೆಯನ್ನು ಶುಚಿಗೊಳಿಸಿ ಮಂಟಪವನ್ನು ಸಿದ್ಧಪಡಿಸಿ ತಳಿರು, ತೋರಣಗಳಿಂದ ಶೃಂಗರಿಸಿದರು. ಕುಟುಂಬದ ಎಲ್ಲ ಸದಸ್ಯರು ಸೇರಿ ಮನೆಯನ್ನು ಅಂದಗೊಳಿಸಿದರು. ಬಾಳೆ ಕಂಬದಿಂದ ಅಲಂಕೃತ ಮಂಟಪದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ನೆರವೇರಿಸಿದರು.

ಶ್ರೀದೇವಿಯ ಗುಣಗಾನ ಮಾಡುವ ಹಾಡುಗಳನ್ನು ಹೇಳಿ, ದೇವಿ ಒಲುಮೆಗಾಗಿ ಪ್ರಾರ್ಥಿಸಿದರು. ಹಣ್ಣು ಹಂಪಲು, ಸಿಹಿ ಪದಾರ್ಥ, ಚಕ್ಕುಲಿ, ಕಾಯಿ, ಕಡಬು, ಭಜಿ ಮುಂತಾದ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.

ಬಂಧು ಬಳಗ, ಸುಮಂಗಲೆಯರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬಿ, ಫಲಪುಷ್ಪಗಳನ್ನು ನೀಡಿದರು.

ಇನ್ನು ನಗರದ ಹಲವು ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಯಿತು. ಹುಬ್ಬಳ್ಳಿಯ ದಾಜಿಬಾನ ಪೇಟ, ಲಕ್ಷ್ಮೀ ದೇವಸ್ಥಾನ, ವಿದ್ಯಾನಗರದ ದೇವಸ್ಥಾನ, ಧಾರವಾಡ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಮಹಾಲಕ್ಷ್ಮಿ ದೇವಸ್ಥಾನಗಳಲ್ಲಿ ಶುಕ್ರವಾರ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಹಲವು ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net