

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಬ್ಬದ ಮುನ್ನಾದಿನವಾದ ಗುರುವಾರ ಸಂಜೆ ಹಲವೆಡೆ ಮಳೆರಾಯ ಅಬ್ಬರಿಸಿದರೂ ಮಳೆ ನಡೆವೆಯೂ ಹಬ್ಬದ ಸಾಮಾಗ್ರಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಶುಕ್ರವಾರ ಮುಂಜಾನೆಯೇ ಮಾರುಕಟ್ಟೆಗಳಲ್ಲಿ ಹೂ ಹಣ್ಣು ಖರೀದಿಯಲ್ಲಿ ಸಾರ್ವಜನಿಕರು ಬಿಜಿಯಾಗಿದ್ದ ದೃಶ್ಯ ಕಂಡುಬಂತು.
ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಜನ ಸಂಭ್ರಮದಿಂದ ಸ್ವಾಗತಿಸಿದರು.
ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಹೂವು ಹಣ್ಣು ತರಕಾರಿ ಬೆಲೆ ಕಡಿಮೆ ಇರುತ್ತದೆ ಆದರೆ ಕಳೆದ ಬಾರಿ ಅನಾವೃಷ್ಟಿ ಈ ಬಾರಿಯ ಅತೀವೃಷ್ಟಿಯಿಂದ ಹೂ ಹಣ್ಣಿನ ದರ ಗಗನಮುಖಿಯಾಗಿದ್ದು ಗ್ರಾಹಕರ ಜೇಬು ಸುಡುವಂತಿದ್ದರೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕರಗಿರಲಿಲ್ಲ. ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿಯನ್ನು ಜಿಲ್ಲೆಯ ಜನರು ಸಂಭ್ರಮದಿಂದಲೇ ಬರಮಾಡಿಕೊಂಡರು.
ಹೂವಿನ ಬೆಲೆ ದುಬಾರಿ: ಹೂವಿನ ಇಳುವರಿ ಕಡಿಮೆಯಾಗಿದ್ದು ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ದುಬಾರಿಯಾಗಿವೆ, ಇತರೆ ಹಬ್ಬದ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದು ಈ ಬಾರಿ ವರಮಹಾಲಕ್ಷ್ಮಿ ಭಕ್ತರ ಪಾಲಿಗೆ ದುಬಾರಿಯಾಗಿದ್ದರೂ ಮನೆ ಮನೆಗಳಲ್ಲಿ ಮಹಾಲಕ್ಷ್ಮೀ ಪ್ರತಿಷ್ಟಾಪನೆಗೆ ಯಾವುದೇ ಕೊರತೆ ಇರಲಿಲ್ಲ.
ನೆಲಮಂಗಲದಲ್ಲಿ ಭರ್ಜರಿ ವ್ಯಾಪಾರ: ನಗರದ ಚೆನ್ನಪ್ಪಬಡಾವಣೆ, ಟಿ.ಬಿ.ಸ್ಪಾಪ್, ಬಸ್ ನಿಲ್ದಾಣ, ಸಂತೆಮೈದಾನ ಪೇಟೆಬೀದಿ ಸೇರಿ ತಾಲೂಕು ಕಚೇರಿ, ಪಟ್ಟಣ ಪೊಲೀಸ್ ಠಾಣೆಯವರೆಗಿನ ರಸ್ತೆಯದ್ದಕ್ಕೂ ಹಬ್ಬದ ವಸ್ತುಗಳ ಜತೆಗೆ ದಿನನಿತ್ಯ ಬಳಕೆ ವಸ್ತುಗಳ ಅಂಗಡಿಗಳಲ್ಲಿ ಸಾರ್ವಜನಿಕರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.
ವಾಹನ ದಟ್ಟಣೆ: ಒಂದಡೆ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಾಗ್ರಿ ಖರೀದಿಗೆ ಜನ ಮುಗಿಬಿದ್ದಿದ್ದರೆ ಮತ್ತೊಂದೆಡೆ ಮಳೆಯಿಂದಾಗಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿ ವಾಹನದಟ್ಟಣೆ ಕಂಡುಬಂತು. ಮಳೆ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಮುಂಗಟ್ಟುಗಳ ಬಳಿ ಜಮಾಯಿಸಿದ್ದರಿಂದ ಇನ್ನಿತರ ವಾಹನ ಸವಾರರು ಪರದಾಡುವಂತಾಯಿತು.
ದೇಗುಲಗಳಲ್ಲಿ ವಿಶೇಷ ಪೂಜೆ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಲಕ್ಷ್ಮೀ ದೇಗುಲಗಳು ಸೇರಿ ಇನ್ನಿತರ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ನೆಲಮಂಗಲದ ಶಿವಗಂಗೆ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಷೇತ್ರ, ಮಧುರೆಯ ಶನಿಮಹಾತ್ಮ ದೇಗುಲ ಸೇರಿ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂತು.
ಹೆಂಗಳೆಯರ ಸಂಭ್ರಮ: ಮನೆಮನೆಗಳಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಟಾಪಿಸಿದ್ದ ಮಹಿಳೆಯರು ಸಂಭ್ರಮದಿಂದ ಹಬ್ಬ ಆಚರಿಸಿದರು. ತರಹೇವಾರಿಯಾಗಿ ಲಕ್ಷ್ಮಿದೇವಿಯನ್ನು ಸಿಂಗರಿಸಿ ನೆರೆಹೊರೆಯವರನ್ನು ಅರಿಶಿನ ಕುಂಕುಮಕ್ಕೆ ಕರೆದು ಸಿಹಿ ಹಂಚಿ ಸಂಭ್ರಮಿಸಿದರು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ನಗರವಾಸಿಗಳು ಗ್ರಾಮೀಣ ಪ್ರದೇಶಗಳತ್ತ ಹೆಜ್ಜೆ ಹಾಕಿದ್ದರು. ಇದರಿಂದ ಬಂಧು-ಬಳಗ, ಸ್ನೇಹಿತರರೊಡಗೂಡಿ ಜನರು ಲಕ್ಷ್ಮೀದೇವಿಯನ್ನು ಆರಾಧಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಹೆಣ್ಣು ಮಕ್ಕಳು ಹೊಸ ಉಡುಗೆತೊಡುಗೆ ತೊಟ್ಟು ಸಂಭ್ರಮಿಸಿದರು.