ದ.ಕ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯ ವರಮಹಾಲಕ್ಷ್ಮೀ ವ್ರತಾಚರಣೆ

mng-aug5-kudroli1
Published on

ಮಂಗಳೂರು: ವರಗಳ ಕರುಣಿಸುವ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದಿನವಿಡೀ ಉಪವಾಸವಿದ್ದು ದೇವಳಗಳಲ್ಲಿ ಪೂಜೆಯಲ್ಲಿ ಭಾಗವಹಿಸಿದ ಭಕ್ತರು ಬಳಿಕ ಪ್ರಸಾದ ಸೇವನೆ ಮಾಡಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಭಗವತೀ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಮೊದಲಾದ ದೇವಿ ಆಲಯಗಳಲ್ಲಿ ಪೂಜೆ ನೆರವೇರಿತು.
ದೇವಳಗಳಲ್ಲಿ ಕೆಲವೆಡೆ ಬೆಳಗ್ಗೆ, ಕೆಲವೆಡೆ ಸಾಯಂಕಾಲ ಪೂಜೆ ಜರುಗಿತು. ಮಹಿಳೆಯರೂ ಮನೆಗಳಲ್ಲೂ ವರ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿ, ಮುತ್ತೈದೆಯರಿಗೆ ಬಾಗಿನ ಸಮರ್ಪಿಸಿದರು. ದೇವಳಗಳಲ್ಲೂ ಮಹಿಳೆಯರಿಗೆ ಅರಶಿನ-ಕುಂಕುಮ, ಬಳೆ ವಿತರಿಸಲಾಯಿತು.
ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಿತು. ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಿತು. ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಕೋಶಾಧಿಕಾರಿ ಆರ್.ಪದ್ಮರಾಜ್ ಮೊದಲಾದವರಿದ್ದರು. ಕುದ್ರೋಳಿ ಭಗವತಿ ಕ್ಷೇತ್ರದಲ್ಲೂ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಿಳೆಯರು ಪಾರಾಯಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net