

ನಾಪೋಕ್ಲು: ಧರ್ಮ ಎನ್ನುವುದು ಹೊರಗಿಲ್ಲ. ಅದು ಇರುವುದು ಅಂತರಂಗದಲ್ಲಿ ಮತ್ತು ನಿತ್ಯದ ನಡವಳಿಕೆಯಲ್ಲಿ. ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುತ್ತಾ ಗಳಿಕೆಯ ಜತೆಗೆ ಉಳಿಕೆಯ ಬಗ್ಗೆ ಕೂಡ ಪ್ರತಿ ಕ್ಷಣ ಜನತೆ ಎಚ್ಚರದಲ್ಲಿರಬೇಕು. ಅದೇ ಲಕ್ಷ್ಮೀಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು.
ಸಂಪಾಜೆ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮಟ್ಟದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ, ಮತ ಭೇದವಿಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಜನೋಪಯೋಗಿ ಕೆಲಸವನ್ನು ಮುಕ್ತ ಕಂಠದಿಂದ ಪ್ರಸಂಶಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ ಮಾತನಾಡಿ, ಪಶುತ್ವ, ಮನುಷ್ಯತ್ವ, ದೈವತ್ವದ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನಮುಟ್ಟುವಂತೆ ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಧನಂಜಯ ಆಗೋಳಿಕಜೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ರಾಜೇಶ್, ಉದಯ ಭಾಸ್ಕರ್, ದೇವರ ಕೊಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಯಶೋಧರ ಸಂಪಾಜೆ ಇತರರು ಇದ್ದರು.