

ಬೆಂಗಳೂರು: ನಗರದಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಬೆಳಗ್ಗೆಯಿಂದಲೇ ಸುಮಂಗಲೆಯರು ಮಹಾಲಕ್ಷ್ಮಿಯನ್ನು ಪೂಜಿಸುವ ಸಿದ್ಧತೆಯಲ್ಲಿ ತೊಡಗಿದ್ದರು. ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಭಕ್ತರ ಪೂಜಾ ವೈಭವಕ್ಕೇನು ಕೊರತೆಯಾಗಿರಲಿಲ್ಲ.
ನಗರದ ಪ್ರಮುಖ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಯಿತು. ಅದರಲ್ಲೂ ವಿಶೇಷವಾಗಿ ಮಹಾಲಕ್ಷ್ಮಿ ಸೇರಿದಂತೆ ದೇವತೆಗಳ ದೇವಾಲಯಗಳಲ್ಲಿ ಪೂಜೆಯ ಸಂಭ್ರಮ ಜೋರಾಗಿತ್ತು.
ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬರಲಾರಂಭಿಸಿತ್ತು. ದೇವರ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಕನಕಪುರ ರಸ್ತೆಯ ಬನಶಂಕರಿ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷಪೂಜೆ ಹಾಗೂ ವರಮಹಾಲಕ್ಷ್ಮಿ ಕಲಶವನ್ನು ಸ್ಥಾಪಿಸಿ ವ್ರತನಿಯಮದಂತೆ ಪೂಜೆಯನ್ನು ಕೈಗೊಳ್ಳಲಾಗಿತ್ತು. ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಮೀನಾಕ್ಷಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿರುವ ಪದ್ಮಾವತಿ ಅಮ್ಮನವರಿಗೆ ದಿನಪೂರ್ತಿ ಕುಂಕುಮಾರ್ಚನೆ, ಆಕರ್ಷಕ ಹೂವಿನ ಅಲಂಕಾರ ಮತ್ತು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಇನ್ನುಳಿದಂತೆ ಜಾಲಹಳ್ಳಿ ಮುತ್ಯಾಲಮ್ಮ ದೇವಾಲಯ, ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯ, ಮಲ್ಲೇಶ್ವರದ ಗಂಗಮ್ಮದೇವಿ ದೇವಾಲಯ, ಕೆಂಪೇಗೌಡನಗರದ ಬಂಡಿಕಾಳಮ್ಮ ದೇವಾಲಯ ಸೇರಿದಂತೆ ನಗರದ ಶಕ್ತಿದೇವತೆಗಳ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮುಜರಾಯಿ ಇಲಾಖೆ ಅಧೀನದ ಎಲ್ಲ ದೇವಾಲಯಗಳಿಗೆ ಬಂದ ಸುಮಂಗಲೆಯರಿಗೆ ಅರಿಶಿಣ-ಕುಂಕುಮ ಮತ್ತು ಬಳೆಗಳನ್ನು ನೀಡಿ ಗೌರವಿಸಲಾಯಿತು.
ಇನ್ನು ಮನೆಗಳಲ್ಲಿ ಮುತ್ತೈದೆಯರು ಅದ್ದೂರಿಯಾಗಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿವಿಧ ಪುಷ್ಪ, ಒಡವೆ, ವಸ, ನಾಣ್ಯಗಳಿಂದ ಶೃಂಗರಿಸಿ ಪೂಜಿಸಿದರು. ನೆರೆ-ಹೊರೆಯ ಮಹಿಳೆಯರನ್ನು ಆಹ್ವಾನಿಸಿ ಬಾಗೀನ ಅರ್ಪಿಸಿದರು.