ಸಕಲ ಭಾಗ್ಯಗಳ ಪ್ರಾರ್ಥನೆಯ ವರಮಹಾಲಕ್ಷ್ಮೀ ಹಬ್ಬ, ಮನೆ ಮನೆಗಳಲ್ಲಿ ಸಂಭ್ರಮ

IMG-20240816-WA0072
Published on

ಚಿಕ್ಕಬಳ್ಳಾಪುರ: ಸಮೃದ್ಧಿ, ಆದಾಯ ಮತ್ತು ಸಕಲ ಭಾಗ್ಯಗಳ ಪ್ರಾರ್ಥನೆಯ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಸಂಭ್ರಮದಲ್ಲಿ ಪೈಪೋಟಿ ಕಂಡು ಬಂತು. ಅದರಲ್ಲೂ ಮಹಿಳೆಯರು ಸಾಂಪ್ರದಾಯಿಕ ಪದ್ದತಿಗಳ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಆಕರ್ಷಕ ರೀತಿಯಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಬಹುತೇಕರ ಮನೆಯಲ್ಲಿ ಸಂಭ್ರಮದ ವಾತಾವರಣ ಜೋರಾಗಿತ್ತು.

ಹಬ್ಬದ ದಿನ ಬೆಳ್ಳಂಬೆಳಗ್ಗೆ ಮನೆಗಳ ಮುಂದೆ ರಂಗೋಲಿ, ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವಿನಿಂದ ಅಲಂಕರಿಸಲಾಗಿತ್ತು. ನಗರದ ಮಾರುಕಟ್ಟೆಯಲ್ಲಿ ಹಬ್ಬದ ದಿನದಂದು ಸಹ ಜನರು ಹೂವು ಹಣ್ಣು ಮತ್ತಿತರ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.

ಕೆಲವರ ಮನೆಯಲ್ಲಿ ದೇವರಿಗೆ ಮಂಟಪವನ್ನು ಸಿದ್ಧಪಡಿಸಿ, ವಿದ್ಯುತ್​ ದೀಪ, ಬಾಳೆ ಕಂದು, ಹೂವಿನಿಂದ ಅಲಂಕರಿಸಲಾಗಿತ್ತು. ಮಂಟಪದ ಮಧ್ಯೆ ಕಳಸದೊಂದಿಗೆ ದೇವಿಯ ಮುಖವಾಡವಿರಿಸಿ ಚಿನ್ನಾಭರಣದಿಂದ ಸಿಂಗಾರ ಮಾಡಲಾಗಿತ್ತು. ಅಲ್ಲದೇ ಹಣವನ್ನು ಪೂಜೆಗಾಗಿ ಇರಿಸಲಾಗಿತ್ತು. ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ಒಬ್ಬಟ್ಟು ಮತ್ತಿತರ ಸಿಹಿ ತಿನಿಸುಗಳನ್ನು ತಯಾರಿಸಿ, ಕುಟುಂಬಸ್ಥರು ಹಬ್ಬದ ಊಟ ಸವಿದರು. ಸಂಜೆ ಅಕ್ಕಪಕ್ಕ ವಾಸವಿರುವ ಮುತೆದೆಯರನ್ನು ಆಹ್ವಾನಿಸಿ ಅರಿಶಿನ, ಕುಂಕುಮ ನೀಡಿದರು. ಬಳಿಕ ಭಕ್ತೀಗಿತೆಗಳ ಗಾಯನದೊಂದಿಗೆ ದೇವರಿಗೆ ಆರತಿ ಬೆಳಗಿದರು. ಕುಟುಂಬಸ್ಥರು ಹೊಸ ಬಟ್ಟೆಗಳನ್ನು ಧರಿಸಿ, ಖುಷಿಪಟ್ಟರು.

*ವಿವಿಧ ದೇಗುಲದಲ್ಲಿ ಪೂಜೆ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಕಂದವಾರಪೇಟೆಯ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ತಾಲೂಕಿನ ಮೈಲಪನಹಳ್ಳಿ ಲಕ್ಷ್ಮೀ ದೇವಸ್ಥಾನ, ಹನುಮಂತಪುರದ ಜಾಲಾರಿ ನರಸಿಂಹಸ್ವಾಮಿ, ಮಾರಗಾನಹಳ್ಳಿಯ ಶ್ರೀ ಲಕ್ಷ್ಮೀ ಚನ್ನಕೇಶವ ಸೇರಿದಂತೆ ವಿವಿಧ ಆಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಉಪವಾಸ ವ್ರತಾಚರಣೆಯೊಂದಿಗೆ ಭಕ್ತಾದಿಗಳು ಬೆಳಗ್ಗೆಯಿಂದಲೇ ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಹಬ್ಬದ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರವನ್ನು ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net