

ಮಂಡ್ಯ: ಜಿಲ್ಲಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು.
ಹಬ್ಬದ ಅಂಗವಾಗಿ ದೇವಸ್ಥಾನ ಹಾಗೂ ಮನೆಯಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆಯಿತು. ಹಬ್ಬಕ್ಕೆ ವಾರದಿಂದಲೇ ಸಿದ್ಧತೆ ನಡೆಸಿದ್ದ ಮಹಿಳೆಯರು ಮತ್ತು ಮಕ್ಕಳು ಕಳೆದೆರಡು ದಿನಗಳಿಂದ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಶುಕ್ರವಾರ ಮುಂಜಾನೆಯಿಂದಲೇ ಮನೆಯನ್ನು ಸಿಂಗರಿಸಿ ವರಮಹಾಲಕ್ಷ್ಮೀ ದೇವಿಯ ಫೋಟೋ, ಮುಖವಾಡವನ್ನಿಷ್ಟು ಪೂಜಿಸಿದರು. ಕಳಶ, ಬಿಂದಿಗೆಯಲ್ಲಿ ತೆಂಗಿನಕಾಯಿ ಇಟ್ಟು, ವರಮಹಾಲಕ್ಷ್ಮೀ ದೇವಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು.
ಇನ್ನೂ ಕೆಲ ಮನೆಗಳಲ್ಲಿ ಮಂಟಪಗಳನ್ನು ನಿರ್ಮಿಸಿ, ಕಳಶಗಳಿಗೆ ದೇವಿಯ ಬೆಳ್ಳಿ ಮುಖವಾಡ, ಆಭರಣಗಳಿಂದ ಅಲಂಕರಿಸಿದ್ದರು. ಬಳಿಕ ವರಮಹಾಲಕ್ಷ್ಮೀ ವ್ರತದ ಕಥೆ ಓದುವ ಮೂಲಕ ಭಕ್ತಿಭಾವದಿಂದ ದೇವಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು. ವಿವಿಧ ಮಾದರಿಯ ಸಿಹಿ ತಿನಿಸುಗಳು, ಸಜ್ಜಿಗೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಕಲ್ಲುಸಕ್ಕರೆ ಹಾಗೂ ಇತರ ವಸ್ತುಗಳನ್ನು ಪ್ರಸಾದವಾಗಿಟ್ಟು ಪೂಜಿಸಿದರು. ನೆರೆಹೊರೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ-ಕುಂಕುಮ ನೀಡಿ ಹಬ್ಬವನ್ನು ಸಂಭ್ರಮಿಸಿದರು.
ಜಿಲ್ಲಾದ್ಯಂತ ಲಕ್ಷ್ಮೀ, ವರಮಹಾಲಕ್ಷ್ಮೀ ಹಾಗೂ ಇತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ನಗರದ ಪೇಟೆಬೀದಿಯ ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿರುವ ವರಮಹಾಲಕ್ಷ್ಮೀ ಹಾಗೂ ಶ್ರೀಚಕ್ರ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜಾ ಮಹೋತ್ಸವಗಳು ನಡೆದವು. ಮುಂಜಾನೆಯೇ ಪಂಚಾಮೃತ ಅಭಿಷೇಕ, ಬೆಳ್ಳಿ ಅಲಂಕಾರ, ತೋಮಾಲೆ ಸೇವೆ, ಮಧ್ಯಾಹ್ನ ಮಹಾ ಮಂಗಳಾರತಿ, ತೀರ್ಥ, ಬೆಳಗ್ಗೆಯಿಂದ ಸಂಜೆಯವರೆಗೆ ಲಾಡು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.
ಅಂತೆಯೇ ನಗರದ ಲಕ್ಷ್ಮೀ ಜನಾರ್ದನಸ್ವಾಮಿ, ಕಾಳಿಕಾಂಭ, ವಿದ್ಯಾನಗರದಲ್ಲಿರುವ ಗಣಪತಿ ದೇವಸ್ಥಾನ, ಚಾಮುಂಡೇಶ್ವರಿ ಬಡಾವಣೆಯ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಗರ್ಭಗುಡಿಯನ್ನು 10, 20, 50, 100 ಹಾಗೂ 500 ರೂ ಮುಖಬೆಲೆಯ ನೋಟುಗಳಿಂದ ಅಲಂಕರಿಸಲಾಗಿತ್ತು. ದೇವಿಯ ಮೂರ್ತಿಗೆ ಧನಲಕ್ಷ್ಮೀ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಂಗಪಟ್ಟಣದ ನಿಮಿಷಾಂಭ, ಪಾಂಡವಪುರ ತಾಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯ, ಮದ್ದೂರಿನ ದೇಶಹಳ್ಳಿಯ ಆದಿಶಕ್ತಿ ದೇವಸ್ಥಾನ, ಮದ್ದೂರಮ್ಮನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮಾತ್ರವಲ್ಲದೆ ಪ್ರಸಾದ ವಿತರಣೆ ಮಾಡಲಾಯಿತು.