ಶಿವಮೊಗ್ಗ ಜಿಲ್ಲಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಡಗರ

lakshmi
ಶಿವಮೊಗ್ಗದ ಮನೆಯೊಂದರಲ್ಲಿ ವರಮಹಾಲಕ್ಷ್ಮೀ ಪೂಜೆ.
Published on

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಯೊಂದಿಗೆ ಲಕ್ಷ್ಮೀ ದೇವಿಯನ್ನು ಸ್ತುತಿಸಲಾಯಿತು.

ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಶಿವಮೊಗ್ಗದ ಕೋಟೆ ಮಾರಿಕಾಂಬೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಎಸ್‌ಕೆಎಂ ರಸ್ತೆಯ ಲಕ್ಷ್ಮೀವೆಂಕಟರಮಣ ದೇವಾಲಯದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳಾ ಮಂಡಳಿಯಿಂದ ಸಾಮೂಹಿಕ ಕುಂಕುಮಾರ್ಚನೆ ಮತ್ತು ಲಕ್ಷ್ಮೀ ಸಹಸ್ರನಾಮ ಪೂಜೆ ನೆರವೇರಿಸಲಾಯಿತು.
ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 10ರವರೆಗೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು, ಹೂ, ಕಾಯಿ ಪೂಜಾ ಪರಿಕರಗಳ ಖರೀದಿ ನಡೆಯಿತು. ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿಬಜಾರ್, ಬಿ.ಎಚ್. ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಮತ್ತು ಗೋಪಿ ವೃತ್ತದಲ್ಲಿ ಜನಸಂಚಾರ ಹೆಚ್ಚಿತ್ತು.
ವರಮಹಾಲಕ್ಷ್ಮೀ ಹಬ್ಬದ ದಿನದಂದು ಹೊಸ ವಸ್ತುಗಳನ್ನು ಖರೀದಿಸಿದರೆ ಒಳಿತು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೆಲವರು ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು ಹಾಗೂ ವಾಹನ ಖರೀದಿಗೆ ಮುಂದಾದರು. ಟ್ರಾೃಕ್ಟರ್, ಕಾರ್, ದ್ವಿಚಕ್ರ ವಾಹನಗಳು ಟಿವಿ, ಫ್ರಿಜ್, ವಾಷಿಂಗ್ ಮಷಿನ್ ಮುಂತಾದ ಉಪಕರಣಗಳ ಖರೀದಿ ಜೋರಾಗಿತ್ತು.
ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳ ಪೈಕಿ ವರಮಹಾಲಕ್ಷ್ಮೀ ಹಬ್ಬಕ್ಕೆ ಅದರದ್ದೇ ಆದ ವೈಶಿಷ್ಟೃವಿದೆ. ಸಂಪತ್ತು ದಯಪಾಲಿಸುವ ಲಕ್ಷ್ಮೀ ಆರಾಧನೆ ಈ ಹಬ್ಬದ ಮಹತ್ವ. ಸಿರಿ, ಸಂಪತ್ತು ದಯಪಾಲಿಸುವಂತೆ ಲಕ್ಷ್ಮೀಯನ್ನು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net