

ತುಮಕೂರು: ವರಮಹಾಲಕ್ಷ್ಮೀ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದೊಂದಿಗೆ ನಗರದ ಮನೆಗಳಲ್ಲಿ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.
ಮನೆ, ಮನೆಯಲ್ಲಿ ಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ ಗೃಹಿಣಿಯರು, ಯುವತಿಯರು ಸಕಲ ಇಷ್ಟಾರ್ಥ ಸಿದ್ಧಿಗಾಗಿ ಲಕ್ಷ್ಮೀಯನ್ನು ಪ್ರಾರ್ಥಿಸಿದರು. ನಗರದ ಬಿ.ಎಚ್.ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದ ಶ್ರೀ ಲಕ್ಷ್ಮೀ ದೇವಾಲಯ, ಶ್ರೀರಾಮನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಜೆ.ಸಿ.ರಸ್ತೆಯಲ್ಲಿರುವ, ಶ್ರೀಅನ್ನಪೂರ್ಣೇಶರಿ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.
ಶುಕ್ರವಾರ ಬೆಳಗಿನಿಂದಲೇ ದೇವಸ್ಥಾನದಲ್ಲಿ ಜನಜಂಗುಳಿಯಿತ್ತು. ಗೃಹಿಣಿಯರು, ಯುವತಿಯರು ವರಮಹಾಲಕ್ಷ್ಮೀ ಹಬ್ಬಕ್ಕೆ ಹೊಸ ಸೀರೆ, ಹೊಸ ಉಡುಪು ಧರಿಸಿ ಅರಿಶಿಣ-ಕುಂಕುಮಕ್ಕೆ ಮನೆ, ಮನೆಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಮಿಂದಿದ್ದು ವಿಶೇಷವಾಗಿತ್ತು.
ಟಿಜಿಎಂಸಿ ಮುಂಭಾಗದ ದೇವಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಭಕ್ತರು ಪೂಜೆ ಸಲ್ಲಿಸಿ ದರ್ಶನ ಪಡೆದರು. ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಿ ಭಕ್ತರು ಭಕ್ತಿ ಸಮರ್ಪಿಸಿದರು. ಹಬ್ಬದ ದಿನವಾದ ಶುಕ್ರವಾರ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಸುರಿದಿದೆ, ತುಮಕೂರು ನಗರದಲ್ಲಿಯೂ ಸಂಜೆ ಧಾರಾಕಾರವಾಗಿ ಮಳೆ ಸುರಿದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಭಣಗುಡುತ್ತಿದ್ದ ಕಚೇರಿ, ಮಂದಿರಗಳು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳು ಮಹಿಳಾ ಸಿಬ್ಬಂದಿ ಇಲ್ಲದೆ ಭಣಗುಡುತ್ತಿದ್ದವು. ಆರ್‌ಎಚ್ ರಜೆಗೆ ಅವಕಾಶವಿದ್ದ ಬಹುತೇಕ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ರಜೆ ತೆಗೆದುಕೊಂಡಿದ್ದರು. ಕರೊನಾ ಹಿನ್ನೆಲೆಯಲ್ಲಿ ಗೊರವನಹಳ್ಳಿ ಲಕ್ಷ್ಮೀ ಸೇರಿ ಬಹುತೇಕ ಎಲ್ಲ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಅತೀ ವಿರಳವಿತ್ತು.