

ನ್ಯಾಮತಿ: ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಮುತ್ತೈದೆಯರಿಗೆ ವಿಶೇಷವಾದ ತಿಂಗಳು. ತಮ್ಮ ಕುಟುಂಬದ ಶ್ರೇಯಸ್ಸು, ಅಭಿವೃದ್ಧಿಗಾಗಿ ವರಲಕ್ಷ್ಮೀ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸುತ್ತಾರೆ.
ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಗುರುವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಾಳೆ ಕಂದು, ಹಣ್ಣು, ಹೂ, ಎಲೆ, ಬಾಳೆಹಣ್ಣು, ಕಾಯಿ, ವಿದ್ಯುತ್ ದೀಪ ಸೇರಿದಂತೆ ದೇವಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಭರ್ಜರಿ ವ್ಯಾಪಾರ ನಡೆಯಿತು.
ಮಾರುಕಟ್ಟೆಯಲ್ಲಿ ಸೇವಂತಿ ಹೂ 1 ಮಾರು 150 ರೂ., ಮಲ್ಲಿಗೆ ಹೂ 100 ರೂ., ವೀಳ್ಯದೆಲೆ ಕವಳಿಗೆ 40 ರೂ., ಬಾಳೆಕಂಬ ಎರಡಕ್ಕೆ 30 ರೂ., ಬಾಳೆ ಹಣ್ಣು 1 ಕೆ.ಜಿ 100 ರೂ., ಸಪೋಟ ಕೆಜಿ 80 ರೂ., ಸೇಬು 160 ರೂ., ದಾಳಿಂಬೆ 130 ರೂ., ಮೂಸಂಬಿ 80 ರೂ., ಮರ ಸೇಬು 120 ರೂ. , ದ್ರಾಕ್ಷಿ 120 ರೂ., ಸೀತಾ ಫಲ 100 ರೂ. ಗೆ ಮಾರಾಟವಾದವು.
ಹಬ್ಬದ ಅಂಗವಾಗಿ ದೇವಿ ನೈವೇದ್ಯಕ್ಕಾಗಿ ಕರ್ಜಿ ಕಾಯಿ, ಚಕ್ಕುಲಿ, ಕೋಡುಬಳೆ ಸೇರಿದಂತೆ ವಿಶಿಷ್ಟ ಖಾದ್ಯವನ್ನು ತಯಾರಿಸುವಲ್ಲಿ ಮಹಿಳೆಯರು ನಿರತರಾಗಿದ್ದರು.