

ಸಾಗರ: ಪ್ರತಿ ಗುರುವಾರದ ಸಾಗರ ವಾರದ ಸಂತೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಕಳೆಗಟ್ಟಿತ್ತು.
ಬೆಂಡೆಕಾಯಿ, ಮೂಲಂಗಿ, ಕೋಸು, ಬದನೆಕಾಯಿ, ಶಿರವಾಳ-ಬರದವಳ್ಳಿಯ ಸೌತೇಕಾಯಿ ಹೆಚ್ಚು ಮಾರಾಟವಾಯಿತು. ಮಹಾರಾಷ್ಟ್ರದಿಂದ ಬಂದಿದ್ದ ಟೊಮಾಟೋ ಬೆಲೆ ಹೆಚ್ಚಾಗಿದ್ದರೆ, ಚಿಕ್ಕಮಗಳೂರು ಭಾಗದಿಂದ ಟೊಮಾಟೋ ಕೆಜಿಗೆ 20 ರೂ. ಇತ್ತು. ಇನ್ನು ಹೂ, ಹಣ್ಣು, ಬಾಳೆಕಂಬ, ಕಬ್ಬಿನ ಜಲ್ಲೆ ಮಾರಾಟ ಸಹ ಭರದಿಂದ ಸಾಗಿತು. ಅಲಂಕಾರಿಕಾ ವಸ್ತುಗಳು ಮತ್ತು ಹೂವಿನ ಬೆಲೆ ಕೊಂಚ ದುಬಾರಿಯಾಗಿದ್ದರೂ ಜನ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಸಾಗರದ ಪೇಟೆ ಗ್ರಾಮೀಣ ಜನರ ಓಡಾಟ, ಖರೀದಿಯಿಂದ ಗಿಜಿಗಿಜಿಗೊಡುತ್ತಿತ್ತ್ತು. ಸಂತೆ ಮಾರುಕಟ್ಟೆಯ ಪಕ್ಕದಲ್ಲೇ ಮಹಿಳಾ ಕಾಲೇಜು ಇರುವುದರಿಂದ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು.
ವರಮಹಾಲಕ್ಷ್ಮೀ ಬಹುಮುಖ್ಯವಾದ ಹಬ್ಬ ಆಗಿರುವುದರಿಂದ ಸಂತೆಯಲ್ಲಿ ತರಕಾರಿ ವ್ಯಾಪಾರ ಚೆನ್ನಾಗಿ ನಡೆದಿದೆ. ನಾವು ಶಿವಮೊಗ್ಗ, ಹೊನ್ನಾಳಿ ಮುಂತಾದ ಕಡೆಗಳಿಂದ ಸೊಪ್ಪು, ತರಕಾರಿ ತಂದು ಮಾರುತ್ತಿದ್ದೇವೆ ಎಂದು ಶಿರಾಳಕೊಪ್ಪ ವ್ಯಾಪಾರಿ ಅಬ್ಬಾಸ್ ಹೇಳಿದರು.
ಸಾಗರದ ಸಂತೆ ಮಾರುಕಟ್ಟೆಗೆ ಜನರು ಬಂದು ಖರೀದಿ ಮಾಡುವುದೇ ಕಷ್ಟವಾಗುತ್ತಿದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸಂತೆಯಲ್ಲಿ ಮೊಬೈಲ್, ಬೈಕ್ ಮತ್ತು ಪರ್ಸ್‌ಗಳು ಕಳ್ಳತನವಾಗುತ್ತಿವೆ. ರಕ್ಷಣಾ ಇಲಾಖೆ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾಗರದ ಗಿರಿರಾಜ್ ಒತ್ತಾಯಿಸಿದರು.
ವರಮಹಾಕ್ಷ್ಮೀ ನಮಗೆ ಬಹುಮುಖ್ಯವಾದ ಹಬ್ಬ. ವ್ಯಾಪಾರ, ವಹಿವಾಟು, ಬದುಕು ಎಲ್ಲವೂ ವ್ಯವಸ್ಥಿತವಾಗಿ ನಡೆಯಲಿ, ಲಕ್ಷ್ಮೀ ದೇವಿಯು ತನ್ನ ಕೃಪಾಕಟಾಕ್ಷವನ್ನು ನೀಡಿ ಕುಟುಂಬವನ್ನು ಮುನ್ನಡೆಸಲಿ ಎಂದು ಪೂಜೆ ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ನಮ್ಮ ಯೋಗ್ಯತೆ ಅನುಸಾರವಾಗಿ ಅವಶ್ಯವಾದುದನ್ನು ಖರೀದಿಸಿ ಸಂಪ್ರದಾಯದ ಪ್ರಕಾರ ಪೂಜೆ ಮಾಡುತ್ತೇವೆ.ಶಾರದಾದೇವಿ, ಸಾಗರ