

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ವಾರಾಳಿಯಲ್ಲಿ ನೂತನ ಶಿಲಾಮಯ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಮತ್ತು ಶ್ರೀ ಶಿವರಾಯ ಸ್ವಾಮಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಮಂಗಳವಾರ ಆರಂಭಗೊಂಡಿದ್ದು, ಜೂ.8ರ ವರೆಗೆ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ವಾರಾಳಿ ಬಾಲಕೃಷ್ಣ ಕರಬ ಪ್ರಧಾನ ಅರ್ಚಕತ್ವದಲ್ಲಿ ಚಾಲನೆ ನೀಡಲಾಯಿತು. ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಹೋಮ, ಅಥರ್ವಶೀರ್ಷಾಭಿಷೇಕ, ಉಪನಿಷತ್ ಪಾರಾಯಣ ಮತ್ತು ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ವೃತೋದ್ಯಾಪನಾ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಮಹಾಗಣಪತಿ ದೇವಸ್ಥಾನದಿಂದ, ಅಮ್ಮನವರ ದೇವಸ್ಥಾನ, ಗರಡಿಯ ತನಕ ಪುರೋಹಿತರ ಆಗಮನ, ಪೂರ್ಣಕುಂಭ ಸ್ವಾಗತ ಹಾಗೂ ಮೆರವಣಿಗೆ ಮಧುಪರ್ಕಾದಿಗಳು, ಸಂಜೆ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗೇಹ ಪ್ರತಿಗ್ರಹ, ಬಿಂಬ ಪರಿಗ್ರಹ, ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷ್ನೋ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ಬಿಂಬ ಶುದ್ಧಿ, ಅಧಿವಾಸ ಪೂಜೆ, ಪ್ರತಿಷ್ಠಾಧಿವಾಸ ಹೋಮ, ಪ್ರಾಯಶ್ಚಿತಾದಿಗಳು, ಅನ್ನಸಂತರ್ಪಣೆ ನಡೆಯಿತು.
ಆನುವಂಶಿಕ ಮೊಕ್ತೇಸರ ವಿಠಲ ಶೆಟ್ಟಿ ವಾರಾಳಿಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ವಾರಾಳಿಮನೆ, ಗೌರವಾಧ್ಯಕ್ಷ ಕಿಶೋರ್‌ಕುವಾರ್ ಹೆಗ್ಡೆ, ಕುಟುಂಬದ ಹಿರಿಯರಾದ ಸದಾನಂದ ಶೆಟ್ಟಿ, ಸಮಿತಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ವಾರಾಳಿ ಒಳಬೈಲು, ಕೋಶಾಧಿಕಾರಿ ಎಂ.ಜಯರಾಮ ಶೆಟ್ಟಿ ವಾರಾಳಿಮನೆ, ಬ್ರಹ್ಮಬೈದರ್ಕಳ ಗರಡಿಯ ಕೃಷ್ಣ ಪೂಜಾರಿ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.