

ವಿಜಯವಾಣಿ ಸುದ್ದಿಜಾಲ ಬೈಂದೂರು
ಮಾನವರಾಗಿ ಹುಟ್ಟಿದ ನಾವು ಮಾನವೀಯತೆ ಮತ್ತು ಮನುಷ್ಯತ್ವ ಗುಣ ಅಳವಡಿಸಿಕೊಳ್ಳಬೇಕು. ತಮ್ಮ ಸಂಪಾದನೆಯ ಒಂದು ಭಾಗವನ್ನು ಬಡವರ ಅಭ್ಯುದಯಕ್ಕೆ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರಿಯವಾದ ಕಾರ್ಯ. ಸತ್ಪಾತ್ರರಿಗೆ ಮಾಡಿದ ದಾನ ಪರಿಪೂರ್ಣ ಎಂದೆನಿಕೊಳ್ಳುತ್ತದೆ ಎಂದು ಹೊಸನಗರ ಸಾರಂಗನಜಡ್ಡು ಶ್ರೀಕ್ಷೇತ್ರ ಕಾರ್ತಿಕೆಯ ಪೀಠದ ಯೋಗೀಂದ್ರ ಸ್ವಾಮೀಜಿ ಹೇಳಿದರು.
ಬಿಜೂರು ಗ್ರಾಮದ ಹೊಳೆತೋಟದ ನಿವಾಸಿ ದೊಟ್ಟಮ್ಮಾ ಅವರಿಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿಕೊಟ್ಟ ಶ್ರೀ ವರಲಕ್ಷ್ಮೀ ನಿಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ, ಬೈಂದೂರು ಕ್ಷೇತ್ರ ಮಾತ್ರವಲ್ಲದೆ ರಾಜ್ಯಾದ್ಯಂತ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆ ನಡೆಸಲಾಗುತ್ತಿದೆ. ನೂರಾರು ಬಡ ಕುಟುಂಬಗಳಿಗೆ ನೆರವು ನೀಡುವ ಜತೆಗೆ ಆಶಕ್ತರಿಗೆ ಸಹಕಾರ ಮುಂತಾದ ಸೇವೆ ನೀಡುತ್ತಿದೆ. ಇದುವರೆಗೆ ಒಟ್ಟು 16 ಮನೆಗಳನ್ನು ನಿರ್ಮಿಸಿದ್ದು, ಮೂನ್ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದರು. ಪಿ.ಎಸ್. ಪ್ರಕಾಶ್, ನಿವೃತ್ತ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಉಪ್ಪುಂದ, ಜಿಪಂ ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.
ಸಮಸ್ತ ಕರಾವಳಿಯು ದೈವ, ದೇವರ ನೆಲೆಬೀಡಾಗಿದ್ದು, ಇಲ್ಲಿ ಅನ್ನಕ್ಕೆ ಕೊರತೆಯಿಲ್ಲ ಮತ್ತು ದರಿದ್ರವೂ ಇಲ್ಲ. ಇಲ್ಲಿನ ಮಣ್ಣಿನ ಗುಣ ಸ್ವಭಾವವೇ ಹಾಗಿದೆ. ಇಲ್ಲಿನ ಜನರು ಜೀವನದ ಮೌಲ್ಯವರಿತು ಸಂಸ್ಕೃತಿ, ಸಂಸ್ಕಾರ, ಆಚಾರ, ಸಂಪ್ರದಾಯಗಳ ಮೂಲಕ ಧರ್ಮಯುತವಾಗಿ ಬದುಕು ನಡೆಸುತ್ತಿದ್ದಾರೆ. -ಯೋಗೀಂದ್ರ ಸ್ವಾಮೀಜಿ, ಶ್ರೀಕ್ಷೇತ್ರ ಕಾರ್ತಿಕೆಯ ಪೀಠ ಹೊಸನಗರ https://www.vijayavani.net/kuchur-gram-sabha https://www.vijayavani.net/educational-exhibition