ಬಚ್ಚಲುತೋಡಿಗೆ ಹರಿಯಿತು ವಾರಾಹಿ ನೀರು

water
Published on

ಕೋಟ: ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಉದ್ಯೋ ಖಾತ್ರಿ ಯೋಜನೆಯಡಿಯಲ್ಲಿ ಮೂಡುಗಿಳಿಯಾರಿನ ಬಚ್ಚಲುತೋಡು ಹೂಳೆತ್ತುವ ಕಾರ್ಯ ಮುಗಿದಿದ್ದು, ಕಾಲುವೆಯಲ್ಲಿ ಈಗ ವಾರಾಹಿ ನೀರು ಹರಿಯಲಾರಂಭಿಸಿದೆ. ಬಹುವರ್ಷಗಳಿಂದ ಹೂಳು ತುಂಬಿ ಕಾಲುವೆಯಲ್ಲಿ ನೀರು ಬಾರದೆ ಕೃಷಿ ಮರೆತುಬಿಟ್ಟ ಈ ಪ್ರದೇಶದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಕೋಟ ಕೃಷಿ ಪತ್ತಿನ ಸಹಕಾರಿ ವ್ಯವಸಾಯಕ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ ಮುತುವರ್ಜಿಗೆ ಕೋಟ ಗ್ರಾಪಂ ಅಧ್ಯಕ್ಷೆ ವನೀತಾ ಶ್ರೀಧರ ಆಚಾರ್ಯ ಹಾಗೂ ಪಿಡಿಒ ಸುರೇಶ್ ಕೆ. ಸಹಕಾರದಿಂದ ಈ ಕಾರ್ಯ ಸಾಕಾರಗೊಂಡಿದೆ. ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಗೂಲಿ ಕಾರ್ಮಿಕರನ್ನು ಕೋಟ ಗ್ರಾಮ ಪಂಚಾಯಿತಿ ಸಮರ್ಥವಾಗಿ ಬಳಸಿಕೊಂಡು ಕೆರೆ, ಹೊಳೆ, ತೋಡುಗಳನ್ನು ದುರಸ್ತಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹರ್ಷಗೊಂಡ ಗ್ರಾಮಸ್ಥರು: ಸುಮಾರು 50ರಿಂದ 60 ಎಕ್ರೆ ಕೃಷಿ ಭೂಮಿ ಮಳೆಗಾಲದಲ್ಲಿ ನೆರೆಪೀಡಿತ ಪ್ರದೇಶವಾಗಿ ಕಂಡುಬರುತ್ತಿತ್ತು. ಯಾವ ಕೃಷಿ ಕಾರ್ಯವೂ ನಡೆಸಲಾಗದ ಸ್ಥಿತಿಯಲ್ಲಿತ್ತು. ಒಂದೆಡೆ ತೋಡಿನಲ್ಲಿ ಹೂಳು ತುಂಬಿದರೆ ಇನ್ನೊಂದೆಡೆ ಮರಗಿಡಗಳಿಂದ ನೀರು ಹರಿಯಲಾಗದೆ ಗದ್ದೆಭಾಗ ಆವರಿಸಿಕೊಳ್ಳುತ್ತಿತ್ತು. ಇದರಿಂದ ಬೇಸತ್ತ ಜನ ಪ್ರತಿವರ್ಷ ಪಂಚಾಯಿತಿ ಕಡೆ ಮುಖ ಮಾಡುತ್ತಿದ್ದರು. ಆದರೆ ಈಗ ಸರ್ಕಾರದ ನರೇಗಾ ಯೋಜನೆಯಿಂದ ಬಚ್ಚಲುತೋಡು ಹೂಳೆತ್ತಲಾಗಿದೆ. ಇದರಿಂದ ಎಷ್ಟೊ ವರ್ಷಗಳ ಬಳಿಕ ವಾರಾಹಿ ನೀರು ಹರಿಯುವಂತಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.

ಬಚ್ಚಲು ತೋಡು ಹೂಳೆತ್ತುವ ಕನಸು ಇಂದು ನಿನ್ನೆಯದಲ್ಲ. ಅಲ್ಲದೆ ಅದೆಷ್ಟೊ ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಕಾಣದ ನೀರು ಸರಾಗವಾಗಿ ಹರಿಯುವಂತಾಗಿದೆ. ಇದು ಮೂಡುಗಿಳಿಯಾರು ಜನತೆಯ ಕೊಡುಗೆ ಹಾಗೂ ಕನಸು ಕೂಡ ಆಗಿದೆ. ರಾಜಾರಾಮ್ ಶೆಟ್ಟಿಉಪಾಧ್ಯಕ್ಷರು, ಕೋಟ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net