ಮೆಕ್ಕೆಜೋಳಕ್ಕೆ ವರಾಹ ಕಾಟ: ರಾಣೆಬೆನ್ನೂರಲ್ಲಿ ಜಮೀನಿಗೆ ನುಗ್ಗಿ ಬೆಳೆ ತಿನ್ನುತ್ತಿರುವ ಹಂದಿಗಳ ಹಿಂಡು

MIZE COLLAPSE
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ನಗರದ ಸುತ್ತಮುತ್ತಲಿನ ಜಮೀನುಗಳಿಗೆ ರಾತ್ರೋರಾತ್ರಿ ಹಂದಿಗಳ ಹಿಂಡು ನುಗ್ಗಿ ತೆನೆ ಕಟ್ಟಿದ ಮೆಕ್ಕೆಜೋಳ ಬೆಳೆಯನ್ನು ತಿಂದು ಹಾಕುತ್ತಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

ನಗರದ ಹೊರವಲಯದ ಹಲಗೇರಿ ರಸ್ತೆ, ಎರೇಕುಪ್ಪಿ ರಸ್ತೆ, ದೇವರಗುಡ್ಡ ರಸ್ತೆ, ಪಿ.ಬಿ. ರಸ್ತೆ ಹಾಗೂ ಮಾಗೋಡ ರಸ್ತೆಯುದ್ದಕ್ಕೂ ಇರುವ ನೂರಾರು ಎಕರೆ ಜಮೀನುಗಳಲ್ಲಿ ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ನೀರಾವರಿ ಮಾಡಿಕೊಂಡ ರೈತರ ಬೆಳೆಗಳು ಈಗಾಗಲೆ ತೆನೆ ಕಟ್ಟಿವೆ. ಆದರೆ, ಮಾರುತಿ ನಗರ, ಕೊರಚರ ಓಣಿಗಳಲ್ಲಿ ಸಾಕಿರುವ ಹಂದಿಗಳು ರಾತ್ರಿ ಸಮಯದಲ್ಲಿ ರೈತರು ಬೆಳೆದ ಮೆಕ್ಕೆಜೋಳ ಬೆಳೆಯ ಮೇಲೆ ದಾಳಿ ಮಾಡುತ್ತಿವೆ. ಮೆಕ್ಕೆಜೋಳದ ದಂಟುಗಳನ್ನು ಬುಡಸಮೇತ ಕಿತ್ತು ಹಾಕಿ, ಕಾಳು ಕಟ್ಟಿದ ತೆನೆಗಳನ್ನು ತಿನ್ನುತ್ತಿವೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

ಕಳೆದ ಒಂದು ವಾರದಿಂದ ಹಂದಿಗಳ ಕಾಟ ಅಧಿಕವಾಗಿದೆ. ಈಗಾಗಲೇ 50ಕ್ಕೂ ಅಧಿಕ ಎಕರೆಯಷ್ಟು ಬೆಳೆ ಹಾನಿ ಮಾಡಿವೆ. ಆದ್ದರಿಂದ ಹಂದಿಗಳ ಕಾಟ ತಡೆಯುವಂತೆ ಕೃಷಿ ಅಧಿಕಾರಿಗಳಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಈವರೆಗೆ ಯಾವೊಬ್ಬ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಹಂದಿಗಳ ಕಾಟ ತಡೆಯುವ ಬಗ್ಗೆ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಕ್ಯಾರೇ ಎನ್ನದ ಮಾಲೀಕರು

ಈ ಕುರಿತು ಹಂದಿಗಳ ಮಾಲೀಕರಿಗೆ ತಿಳಿಸಿದರೆ, ‘ಅವು ಮೂಕ ಪ್ರಾಣಿಗಳು, ನಾವೇನು ಮಾಡಬೇಕು? ಸ್ವಲ್ಪ ತಿಂದು ಹೋಗುತ್ತವೆ. ಬಿಡಿ’ ಎನ್ನುವ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಅಲ್ಲದೆ, ಅವುಗಳನ್ನು ಕೂಡಿ ಹಾಕುವಂತೆ ಹೇಳಿದರೆ, ‘ಊಟಕ್ಕೆ ನೀವು ತಂದು ಹಾಕ್ತೀರಾ? ಹಂದಿಗಳಿಗೆ ಏನಾದರೂ ತೊಂದರೆ ಕೊಟ್ಟರೆ ನೋಡಿ’ ಎಂದು ಧಮ್ಕಿ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂಬುದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಣ್ಣೀರು ಹಾಕುವ ಸ್ಥಿತಿ

ರೈತ ಗುಡ್ಡಪ್ಪ ಎಂಬುವವರು ಹಲಗೇರಿ ರಸ್ತೆಯಲ್ಲಿ ಎಕರೆಗೆ 10 ಸಾವಿರ ರೂ.ನಂತೆ 2 ಎಕರೆ ಜಮೀನು ಲಾವಣಿ ತೆಗೆದುಕೊಂಡು ಮೆಕ್ಕೆಜೋಳ ಬೆಳೆದಿದ್ದಾರೆ. ಬೀಜ, ಗೊಬ್ಬರ, ಔಷಧಕ್ಕಾಗಿ ಹಲವು ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆ ಕೂಡ ಭರಪೂರ ಬಂದಿದೆ. ಆದರೆ, ಮೂರ್ನಾಲ್ಕು ದಿನದಲ್ಲಿ ಸಂಪೂರ್ಣ ಬೆಳೆಯನ್ನು ಹಂದಿಗಳು ತಿಂದು ಹಾಕಿವೆ. ಕಷ್ಟಪಟ್ಟು ಮೆಕ್ಕೆಜೋಳ ಬೆಳೆದಿದ್ದೇನೆ. ಈಗ ಎಲ್ಲ ಬೆಳೆ ಹಂದಿಗಳ ಪಾಲಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಕಣ್ಣೀರು ಹಾಕುವುದೊಂದು ಬಾಕಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಕೃಷಿ, ನಗರಸಭೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಹಂದಿಗಳ ಕಾಟ ತಡೆಯಬೇಕು. ಇಲ್ಲವಾದರೆ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. | ಗುಡ್ಡಪ್ಪ, ರೈತ ಹಂದಿಗಳು ಮೆಕ್ಕೆಜೋಳ ಬೆಳೆ ತಿನ್ನುತ್ತಿರುವ ಕುರಿತು ಹಾಗೂ ಹಂದಿಗಳ ದಾಳಿ ತಡೆಯುವ ಕುರಿತು ಅಧಿಕಾರಿಗಳಿಗೆ ಸೂಚಿಸಿ ಅವುಗಳ ಮಾಲೀಕರಿಗೆ ನೋಟಿಸ್ ನೀಡಲು ಹೇಳುತ್ತೇನೆ. ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಹಂದಿಗಳನ್ನು ಹೊರಗೆ ಬಿಡದಂತೆ ಅವುಗಳ ಮಾಲೀಕರಿಗೆ ಎಚ್ಚರಿಸಲಾಗುವುದು. | ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net