

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಕಣ್ಮರೆಯಾಗಿದ್ದು ಆಂಬುಲೆನ್ಸ್ ಗುರುವಾರ ದೊಡ್ಡಹೆಜ್ಜಾಗಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಎದುರು ದಿಢೀರ್ ಪ್ರತ್ಯಕ್ಷವಾಗಿದೆ.
ದೊಡ್ಡಬೆಳವಂಗಲದಲ್ಲಿ ನಾಲ್ಕೈದು ವರ್ಷದಿಂದ ಆಂಬುಲೆನ್ಸ್ ಸಿಗದಿರುವ ಬಗ್ಗೆ ಗಮನಿಸಿದ ಜಿಲ್ಲಾಡಳಿತ ಕೂಡಲೇ ಆಂಬುಲೆನ್ಸ್ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಸಲು ಹೋಬಳಿಯಲ್ಲಿನ ಆಂಬುಲೆನ್ಸ್‌ನ್ನು ತಾತ್ಕಾಲಿಕವಾಗಿ ಬೆಳಗ್ಗಿನ ಪಾಳೆಯದಲ್ಲಿ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಆಂಬುಲೆನ್ಸ್ ಸೇವೆಗೆ ಸಿದ್ದವಾಗಿ ನಿಂತಿದೆ. ಮತ್ತೊಂದು ಆಂಬುಲೆನ್ಸ್ ವಾಹನ ರಿಪೇರಿಯಲ್ಲಿದ್ದು ಅದು ರಿಪೇರಿ ಆದ ಕೂಡಲೇ ಶಾಶ್ವತವಾಗಿ ಹೋಬಳಿಯಲ್ಲಿ ಸೇವೆ ಸಲ್ಲಿಸಲು ನಿಯೋಜಿಸುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಭರವಸೆ ನೀಡಿದೆ.
30 ಹಳ್ಳಿಗರಿಗೆ ವರದಾನ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತೀ ದೊಡ್ಡ ಹೋಬಳಿ ಎನಿಸಿರುವ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ನೀಡಲಾಗಿತ್ತು.ಆದರೆ ಕಳೆದ ಐದು ವರ್ಷದಿಂದ ಏಕಾಏಕಿ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದ್ದು ಈ ಭಾಗದ ಹಳ್ಳಿ ಜನರು ಪರದಾಡುವಂತಾಗಿತ್ತು. ತುರ್ತು ಸಂದರ್ಭದಲ್ಲಿ ದೊಡ್ಡಬಳ್ಳಾಪುರ, ಬೆಂಗಳೂರು ಮತ್ತಿತರ ಕಡೆಯ ಆಸ್ಪತ್ರೆಗೆ ಸಾಗಲು ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿತ್ತು. ಆಂಬುಲೆನ್ಸ್ ಸೇವೆಗೆ ಮರಳಿದ್ದರಿಂದ 30 ಹಳ್ಳಿ ಜನರು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಕೃಷ್ಣಾರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.
ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ಹೆಚ್ಚಿನ ಕಾಳಜಿ ಇದೆ, ತುರ್ತು ಆರೋಗ್ಯ ಸೇವೆ ಸಂದರ್ಭದಲ್ಲಿ ಆಂಬುಲೆನ್ಸ್ ಪಾತ್ರ ಬಹಳ ಮುಖ್ಯವಾಗಿರುತ್ತದೆ, ದೊಡ್ಡಬೆಳವಂಗಲ ಹೋಬಳಿಯಲ್ಲಿ ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿರುವ ಮಾಹಿತಿ ತಿಳಿದ ಕೂಡಲೇ ಕ್ರಮಕೈಗೊಳ್ಳಲಾಗಿದೆ. ಹೋಬಳಿಯ ಜನರು ಇದರ ಸದ್ಭಳಕೆ ಮಾಡಿಕೊಳ್ಳಬಹುದು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
----
ದೊಡ್ಡಬೆಳವಂಗಲ ಹೋಬಳಿಯಲ್ಲಿ ನಿಯೋಜಿಸಿದ್ದ ಆಂಬುಲೆನ್ಸ್ ಸೇವೆ ಬದಲಾಗಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ತಾತ್ಕಾಲಿಕವಾಗಿ ಆಂಬುಲೆನ್ಸ್ ವಾಹನವನ್ನು ಸೇವೆಗೆ ನಿಯೋಜಿಸಲಾಗಿದೆ. ಮತ್ತೊಂದು ವಾಹನ ರಿಪೇರಿಗೆ ಹೋಗಿದ್ದು ದುರಸ್ತಿ ಬಳಿಕ ಶಾಶ್ವತವಾಗಿ ಹೋಬಳಿಯಲ್ಲಿ ಸೇವೆಗೆ ನಿಯೋಜಿಸಲಾಗುವುದು.
ಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ
ವರದಿ ಪರಿಣಾಮ:
ಆಂಬುಲೆನ್ಸ್ ಇಲ್ಲದೆ 30 ಹಳ್ಳಿ ಜನರ ಪರದಾಟ ಶೀರ್ಷಿಕೆಯಡಿ ವಿಜಯವಾಣಿ ಸೆ.10ರಂದು ವಿಸ್ತಾರವಾಗಿ ಸುದ್ದಿ ಪ್ರಕಟಿಸಿತ್ತು. ದೊಡ್ಡಬೆಳವಂಗಲ ವ್ಯಾಪ್ತಿಯ ಜನರು ಆಂಬುಲೆನ್ಸ್ ಸೇವೆ ಇಲ್ಲದೆ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಆಂಬುಲೆನ್ಸ್ ಸೇವೆಗೆ ಗ್ನೀನ್‌ಸಿಗ್ನಲ್ ನೀಡಿದೆ.