ಇಷ್ಟಾರ್ಥ ನೆರವೇರಿಸುವ ವರದರಾಜಸ್ವಾಮಿ

12HDK04
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಎಚ್.ಡಿ.ಕೋಟೆ: ಶತಮಾನಗಳಿಂದ ಜನರ ಕಷ್ಟಗಳನ್ನು ಪರಿಹರಿಸುವುದರ ಜತೆಗೆ ಇಷ್ಟಾರ್ಥಗಳನ್ನು ಪೂರೈಸುವ ಮೂಲಕ ನೆಮ್ಮದಿಯ ಬದುಕಿಗೆ ದಾರಿದೀಪವಾಗಿರುವ ವರದರಾಜಸ್ವಾಮಿ ಎಲ್ಲರ ನೆಚ್ಚಿನ ಆರಾಧ್ಯ ದೈವವಾಗಿದೆ.

ತಾಲೂಕಿನ ಸೋಮೇಗೌಡನಹುಂಡಿ (ಈಗಿನ ರಾಜೇಗೌಡನಹುಂಡಿ)ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ವರದರಾಜಸ್ವಾಮಿ ದೇವರು ಭಕ್ತರ ಪಾಲಿನ ಕರುಣಾಮಯಿ. ಚೋಳರ ಕಾಲದಲ್ಲಿ ನಿರ್ಮಾಣವಾದ ವರದರಾಜ ಸ್ವಾಮಿ ದೇವಸ್ಥಾನ ತಾಲೂಕಿನಲ್ಲೇ ಪ್ರಥಮವಾಗಿ ಈ ಗ್ರಾಮದಲ್ಲಿ ನಿರ್ಮಾಣವಾದ ದೇವಸ್ಥಾನವಾಗಿದೆ.

ಒಂದೇ ತಲೆಮಾರಿನ ವೈಷ್ಣವ ಸಮುದಾಯದವರು ನೂರಾರು ವರ್ಷಗಳಿಂದ ದೇವರಿಗೆ ಪೂಜೆ ನೆರವೇರಿಸುತ್ತಿರುವುದು ಮತ್ತೊಂದು ವಿಶೇಷ. ಐದು ತಲೆಮಾರಿನಿಂದ ತಿರುವೆಂಕಟಯ್ಯ ಅವರ ಕುಟುಂಬ ಪೂಜೆ ಮಾಡುತ್ತಿದ್ದು, ಪ್ರಸ್ತುತ ತಿರುವೆಂಕಟಯ್ಯ ಅವರ ಕುಡಿ ಮನೋಜ್ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ನೆರವೇರಿಸುತ್ತಿದ್ದಾರೆ. ಪ್ರತಿ ಗುರುವಾರ ಮತ್ತು ಶನಿವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಅದೇ ರೀತಿ ಹಬ್ಬದ ದಿನಗಳಲ್ಲಿ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದು ವಿಶೇಷ. ಅಣ್ಣೂರು, ರಾಜೇಗೌಡನಹುಂಡಿ ಹಾಗೂ ಎಲೆಹುಂಡಿ ಗ್ರಾಮದವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ ನಂತರ ಸರ್ಕಾರದ ಸುಪರ್ದಿಯಲ್ಲಿ ಪೂಜೆ ನಡೆಯುತ್ತಿದೆ.

ಚೋಳರ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ದೇವಸ್ಥಾನ ಇದಾಗಿದ್ದು, ಕಾಲಾನಂತರ ಕಲ್ಲು ಕಂಬಗಳು ಕಳಚಿಕೊಂಡು ದೇವಸ್ಥಾನ ಬೀಳುವ ಹಂತ ತಲುಪಿತು. ನಂತರ ಗ್ರಾಮಸ್ಥರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂಬ ತೀರ್ಮಾನಕ್ಕೆ ಬಂದರು. ಈ ವಿಷಯವನ್ನು ಅಂದಿನ ಶಾಸಕ ದಿ.ಎಸ್.ಚಿಕ್ಕಮಾದು ಅವರ ಗಮನಕ್ಕೆ ತರಲಾಯಿತು. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಶಾಸಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ದೇಗುಲವನ್ನು ಸುಂದರವಾಗಿ ಜೀರ್ಣೋದ್ಧಾರ ಮಾಡಲಾಯಿತು. 3 ವರ್ಷಗಳ ಹಿಂದೆ ಜಾತ್ರೆ ನಡೆಯುತ್ತಿತ್ತು. ಮುಜರಾಯಿ ಇಲಾಖೆ ವ್ಯಾಪ್ತಿಗೆೆ ಒಳಪಡುವ ಮುನ್ನ ಜಾತ್ರೆ ನಡೆಯುತ್ತಿತ್ತು. ಆ ಬಳಿಕ ಜಾತ್ರೆ ನಿಂತು ಹೋಯಿತು.

ನಿಷ್ಠೆ, ನಂಬಿಕೆ, ಭಕ್ತಿಯಿಂದ ಪೂಜೆ ಮಾಡುವವರಿಗೆ ದೇವರು ಒಲಿಯುತ್ತದೆ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ನಾಡಿನಲ್ಲಿ ಮಳೆ ಕಡಿಮೆಯಾದ ಸಂದರ್ಭದಲ್ಲಿ ದೇವರಿಗೆ ಪೂಜೆ ಮಾಡಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಇಂದಿಗೂ ಮನೆ ಮಾಡಿದೆ. ಹೀಗಾಗಿಯೇ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈ ದೇವರ ಬಗ್ಗೆ ಅಪಾರ ನಂಬಿಕೆ.

ನಂಬಿದ ಕಾರ್ಯ ಆಗುತ್ತದೋ ಅಥವಾ ಇಲ್ಲವೋ ಎಂದು ತಿಳಿಯಲು ಭಕ್ತರು ದೇವರ ತಲೆ ಮೇಲೆ ಹೂ ಇಟ್ಟು ಕೇಳುತ್ತಾರೆ. ಅದು ಬಲಕ್ಕೆ ಬಿದ್ದರೆ ಕೆಲಸ ಆಗುತ್ತದೆ, ಎಡಕ್ಕೆ ಬಿದ್ದರೆ ಕೆಲಸ ಆಗುವುದಿಲ್ಲ ಎಂಬುದು ನಂಬಿಕೆ. ಇಂದಿಗೂ ಈ ಪದ್ಧತಿ ಚಾಲ್ತಿಯಲ್ಲಿದೆ. ಇದಲ್ಲದೆ ಚುನಾವಣೆ, ಆಸ್ತಿ ವಿಚಾರ, ವಶೀಕರಣ ಸೇರಿದಂತೆ ಅನೇಕ ರೀತಿಯ ಹರಕೆಗಳನ್ನು ಹೊತ್ತು ಭಕ್ತರು ಇಲ್ಲಿಗೆ ಬರುವುದು ವಾಡಿಕೆ. ಹರಕೆ ತೀರಿದ ನಂತರ ವಸ್ತುಗಳ ರೂಪದಲ್ಲಿ ದಾನ ನೀಡುತ್ತಾರೆ. ದೂರದ ಮೈಸೂರು, ನಂಜನಗೂಡು ಸೇರಿದಂತೆ ಬೇರೆ ಬೇರೆ ಊರುಗಳಿಂದ ಭಕ್ತರು ಬಂದು ಹರಕೆ ಹೊತ್ತೊಕೊಳ್ಳುತ್ತಾರೆ.

ಗ್ರಾಮದ ಹಿನ್ನೆಲೆ: ರಾಜೇಗೌಡನಹುಂಡಿ ಗ್ರಾಮದಲ್ಲಿ ನೂರಿಪ್ಪತ್ತು ವರ್ಷಗಳ ಹಿಂದೆ ವಾಸ ಮಾಡುತ್ತಿದ್ದ ಜನರಲ್ಲಿ ಪ್ಲೇಗ್ ಮತ್ತು ಕಾಲರ ಕಾಣಿಸಿಕೊಂಡಿತು. ಈ ಮಾರಣಾಂತಿಕ ರೋಗ ಇಡೀ ಊರಿಗೆ ಹರಡಿತ್ತು. ಆಗ ಜನರು ಈ ಊರನ್ನು ತೊರೆದು ಹೊಸದಾಗಿ ರಾಜೇಗೌಡನಹುಂಡಿ ಗ್ರಾಮವನ್ನು ಸ್ಥಾಪಿಸಿ ಅಲ್ಲಿ ಬದುಕು ಕಟ್ಟಿಕೊಂಡರು.

ತಾಲೂಕು ಆಡಳಿತದ ಕಚೇರಿ ಕಡತದಲ್ಲಿ ಸೋಮೇಗೌಡನಹುಂಡಿ ಗ್ರಾಮ ಕಂದಾಯ ಗ್ರಾಮ ಎಂದು ಉಲ್ಲೇಖ ಇದೆ. ಆದರೆ ವಾಸ್ತವವಾಗಿ ಗ್ರಾಮ ಕಾಣಲು ಸಾಧ್ಯವಿಲ್ಲ. ಜನರು ಊರನ್ನು ತೊರೆದ ನಂತರ ಈ ಜಾಗವನ್ನು ಉಳುಮೆ ಮಾಡಿ ಬೆಳೆ ಬೆಳೆಯಲು ಪ್ರಾರಂಭಿಸಲಾಯಿತು.

ಸುಮಾರು ಐವತ್ತು ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿದ್ದ ದೇವರ ಮೂರ್ತಿಯನ್ನು ಕದಿಯಲು ಕಳ್ಳರು ಬಂದಿದ್ದರು. ಆ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಸರ್ಪವೊಂದು ಕಾವಲು ಕಾದು ಮೂರ್ತಿಯನ್ನು ರಕ್ಷಣೆ ಮಾಡಿತು. ಅಂದಿನಿಂದ ಇಂದಿನವರೆಗೂ ಈ ದೇವಸ್ಥಾನದಲ್ಲಿ ಸಣ್ಣ ವಸ್ತು ಕೂಡ ಕಳ್ಳತನ ಆಗಿಲ್ಲ ಎಂಬುದು ಈ ಗ್ರಾಮದ ಜನರ ಅಭಿಪ್ರಾಯ.

ಮಾರ್ಗ: ಈ ದೇವಸ್ಥಾನಕ್ಕೆ ಹುಣಸೂರು ಪಟ್ಟಣದಿಂದ 15 ಕಿಮೀ ಕ್ರಮಿಸಿ, ಎಚ್.ಡಿ.ಕೋಟೆ ಪಟ್ಟಣದಿಂದ 14 ಕಿಮೀ ಕ್ರಮಿಸಿ ಬರಬಹುದು. ಹುಣಸೂರು-ಬೇಗೂರು ಮುಖ್ಯ ರಸ್ತೆಯ ಎಲೆಹುಂಡಿ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿ ಈ ದೇವಸ್ಥಾನ ಇದ್ದು, ಕಾಲ್ನಡಿಗೆಯಲ್ಲಿಯೂ ಮುಖ್ಯ ರಸ್ತೆಯಿಂದ ಬರಬಹುದು.

ಐದು ತಲೆಮಾರಿನಿಂದ ನಮ್ಮ ಕುಟುಂಬ ಅಪಾರ ಶಕ್ತಿವಂತ ದೇವರ ಪೂಜೆ ಮಾಡುತ್ತಿದೆ. ಅದನ್ನು ನಾನು ಮುಂದುವರಿಸಿಸುತ್ತಿದ್ದೇನೆ. ಸುತ್ತಮುತ್ತಲಿನ ಗ್ರಾಮಸ್ಥರು ನಮಗೆ ಸಹಕಾರ ನೀಡುತ್ತಿದ್ದಾರೆ.
ಮನೋಜ್ ಅರ್ಚಕ, ರಾಜೇಗೌಡನಹುಂಡಿ ಗ್ರಾಮ

ನಮ್ಮ ತಾತ-ಮುತ್ತಾತ ಕಾಲದಿಂದಲೂ ವರದರಾಜ ಸ್ವಾಮಿಯನ್ನು ನಂಬಲಾಗುತ್ತಿದೆ. ನಮ್ಮ ಎಲ್ಲ ಕೆಲಸ ಕಾರ್ಯಗಳು ದೇವರ ಅನುಗ್ರಹದಿಂದ ನೆರವೇರುತ್ತಿದೆ. ನಾವು ಇಂದು ಉತ್ತಮ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಗ್ರಾಮದ ಶಕ್ತಿ ದೇವರು ಕಾರಣ.
ಕಾರ್ತಿಕ್ ಭಕ್ತ, ರಾಜೇಗೌಡನಹುಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net