

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿನಯಶೀಲತೆ ಮತ್ತು ಸಜ್ಜನಿಕೆಗೆ ಮೂರ್ತರೂಪರಾಗಿದ್ದ ಡಾ. ವರದರಾಜ ಹುಯಿಲಗೋಳರು ಸಜ್ಜನರಲ್ಲಿ ಸಜ್ಜನರಾಗಿ, ವಿನಯವಂತರಲ್ಲಿ ವಿನಯವಂತರಾಗಿ ಬಾಳ ಬೆಳಗಿದ ಅತ್ಯಂತ ಅಪರೂಪದ ವ್ಯಕ್ತಿ ಎಂದು ಹಿರೇಮಲೂರ ಈಶ್ವರನ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಅಭಿಪ್ರಾಯಪಟ್ಟರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ಇಲ್ಲಿನ ಸಾಧನಕೇರಿಯ ಚೈತ್ರದ ಸಭಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ. ವರದರಾಜ ಹುಯಿಲಗೋಳರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರದರಾಜರು ಅಪರೂಪದ ಆದರ್ಶ ಶಿಕ್ಷಕ. ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಕೃತಿ ಸಂಪಾದನೆಗಳಂತಹ ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳಲ್ಲೂ ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಸಾಹಿತ್ಯಿಕ ಸಂಘಟನೆಗಳ ಪದಾಧಿಕಾರಿಗಳಾಗಿ ಆ ಕಾಲದ ಧಾರವಾಡದ ಸಾಹಿತ್ಯಿಕ ಲೋಕದಲ್ಲಿ ಕನ್ನಡ ನುಡಿ ಸೇವಕರಾಗಿ ಗುರುತಿಸಿಕೊಂಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ ಮಾತನಾಡಿ, ಸತತ ಹಿರಿಯ ಸಾಹಿತಿ ದಿಗ್ಗಜರ ನಡುವೆಯೇ ಬೆಳೆದ ವರದರಾಜರು ಅವರಿಂದ ತಮಗೆ ಸಿಕ್ಕ ಅನೇಕ ಪ್ರೇರಣೆಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದರು ಎಂದರು.
ಪ್ರಿಯದರ್ಶಿನಿ ಪಾಟೀಲ ದಾಸರ ಪದಗಳು, ಶರಣರ ವಚನಗಳನ್ನು ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ಪ್ರತಿಭಾ ಮೂಲಿಮನಿ ಮತ್ತು ತಬಲಾದಲ್ಲಿ ಮಳೆ ಮಲ್ಲೇಶ ಹೂಗಾರರು ಸಾಥ್ ನೀಡಿದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ. ಕಾಖಂಡಿಕಿ, ಪ್ರೊ. ದುಷ್ಯಂತ ನಾಡಗೌಡ, ಶ್ರೀಕಾಂತ ಮಾಳವಾಡ, ಡಾ. ಆರ್.ಬಿ. ಚಿಲುಮಿ, ಎಂ.ಎಸ್. ಪರಮೇಶ್ವರ, ಜಿ.ಆರ್.ಭಟ್ಟ, ಹರ್ಷ ಡಂಬಳ, ಮಾಲತೇಶ ಹುಬ್ಬಳ್ಳಿ, ದೀಪಕ ಆಲೂರ, ಪ್ರಕಾಶ ಬಾಳಿಕಾಯಿ, ಎಸ್.ಬಿ. ದ್ವಾರಪಾಲಕ, ಆರ್. ವಿ. ಕಾಖಂಡಿಕಿ, ರಾಜೀವ ಪಾಟೀಲಕುಲಕರ್ಣಿ, ಎಸ್.ಎಂ. ದೇಶಪಾಂಡೆ, ಅನಿಲ ಕಾಖಂಡಿಕಿ, ಇತರರು ಇದ್ದರು.