ಸರಳ, ಸಜ್ಜನ ವ್ಯಕ್ತಿ ವರದರಾಜರು

14 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವೃತ್ತಿಯಿಂದ ಶಿಕ್ಷಕರಾಗಿದ್ದ ಡಾ. ವರದರಾಜ ಹುಯಿಲಗೋಳರು ಪ್ರವೃತ್ತಿಯಿಂದ ಒಬ್ಬ ಸಾಹಿತಿ, ಕಥೆಗಾರ, ಪ್ರಬಂಧಕಾರ, ಉತ್ತಮ ನಾಟಕಕಾರ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿದ ಅಪರೂಪದ ಸರಳ-ಸಜ್ಜನ ವ್ಯಕ್ತಿ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಅಭಿಪ್ರಾಯಪಟ್ಟರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಡಾ. ವರದರಾಜ ಹುಯಿಲಗೋಳರ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ವರದರಾಜರ ಸಂಶೋಧನ ಪ್ರಬಂಧ "ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ', "ಕೈಸ್ತರು ಕನ್ನಡಕ್ಕೆ ನೀಡಿದ ಕಾಣಿಕೆ' ಎಂಬ ಸಂಶೋಧನಾತ್ಮಕ ಕೃತಿಗಳು ಅಪ್ರತಿಮ ಸಾಹಿತ್ಯಿಕ ಸಾಧನೆಗಳು. ಅವರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರಗೊಳಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪಿ.ಬಿ. ಕಲ್ಲಾಪುರ ಮಾತನಾಡಿ, ವರದರಾಜರು 1976ರಲ್ಲಿ ಹುಟ್ಟುಹಾಕಿದ ಅನ್ವೇಷಣ ಕೂಟದ ಮೊದಲ ದಶಕದ ವಿವಿಧ ಕಾರ್ಯಕ್ರಮ, ಸಾಹಿತ್ಯಿಕ ಚಟುವಟಿಕೆಗಳ ವಿಶೇಷತೆ, ವಿವಿಧ ಸಾಹಿತ್ಯಿಕ ಸಂಸ್ಥೆಗಳನ್ನು ನಡೆಸಿದ ಅವರ ಸಂಘಟನಾತ್ಮಕ ಶಕ್ತಿ ಸ್ಮರಿಸಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ರಾಜೀವ ಪಾಟೀಲ ಕುಲಕರ್ಣಿ , ಅನಂತ ಸಿದ್ದೇಶ್ವರ, ಎಂ.ವಿ. ಹೊಸಮನಿ, ಶ್ರೀಪಾದ ನಾಡಿಗೇರ, ರಮೇಶ ಇಟ್ನಾಳ, ಕೆ.ಸಿ. ಪುರಾಣಿಕಮಠ, ಎಸ್​.ಎಂ. ದೇಶಪಾಂಡೆ, ಶ್ರೀಶ ಕಲ್ಲಾಪುರ, ಸರೋಜಾ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net