ನಷ್ಟ ಅನುಭವಿಸಿದವರಿಗೆ ಪರಿಹಾರ ಸಿಗಲಿ: ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಒತ್ತಾಯ

10_10_Mdy_04(Vanyajivi Sapthaha)
Published on

ಮಂಡ್ಯ: ಕಾಡು ಪ್ರಾಣಿಗಳಿಂದ ಬೆಳೆ ಮತ್ತು ಜಾನುವಾರು ನಷ್ಟಕ್ಕೊಳಗಾದವರಿಗೆ ರೈತರಿಗೆ ತಕ್ಷಣ ಪರಿಹಾರ ಸಿಗುವಂತಾಗಬೇಕು. ಜತೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾದಾಗ ಅರಣ್ಯ ಇಲಾಖೆ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಒತ್ತಾಯಿಸಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಸುರಕ್ಷಿತವಾಗಿ ಇರುವಿಕೆ, ವಿಷಯ ಕುರಿತಾದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾಡಂಚಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಕಾಡುಪ್ರಾಣಿಗಳ ದಾಳಿಯಿಂದ ಬೆಳೆಗಳು ನಾಶವಾದರೆ, ಮತ್ತೊಂದೆಡೆ ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅಂತಹ ಪ್ರಕರಣಗಳಲ್ಲಿ ಸರ್ಕಾರ ಅನ್ನದಾತರ ನೆರವಿಗೆ ಬಂದು ಸಹಾಯಹಸ್ತ ಚಾಚಬೇಕೆಂದು ಆಗ್ರಹಿಸಿದರು.
ತಾಲೂಕಿನ ಕಮ್ಮನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಮೃತಪಟ್ಟಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯೋಚಿತವಾಗಿ ನಡೆದುಕೊಂಡು ರೈತರು ಮತ್ತು ಗ್ರಾಮೀಣ ಜನರಲ್ಲಿ ಧೈರ್ಯ ತುಂಬಿದರು. ಆದರೆ, ಹಸುವಿನ ಮಾಲೀಕರಾದ ರೈತ ರಾಜು ಅವರಿಗೆ ಇನ್ನೂ ಪರಿಹಾರ ಮೊತ್ತ ಸಿಕ್ಕಿಲ್ಲ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರ ಹಣ ಕೊಡಿಸಬೇಕೆಂದು ಒತ್ತಾಯಿಸಿದರು.
ತಗ್ಗಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ.ಸುರೇಶ್, ಟಿ.ಮಲ್ಲಿಗೆ, ಎಂ.ಬಿ.ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net