ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು

vanyajeevi
Published on

ಮಡಿಕೇರಿ

ಪ್ರತಿಯೊಬ್ಬರೂ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ, ಪರಿಸರ ಹಾಗೂ ವನ್ಯಜೀವಿಗಳನ್ನು ಉಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ, ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ಅರಣ್ಯ ಭವನ ಆವರಣದಲ್ಲಿ "ಮಾನವ ಪ್ರಾಣಿ ಸಹಬಾಳ್ವೆ" ಎಂಬ ಘೋಷವಾಕ್ಯದೊಂದಿಗೆ 71 ನೇ ವನ್ಯಜೀವಿ ಸಪ್ತಾಹ 2025ರ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪರಿಸರ ನಡಿಗೆ ಕಾಲ್ನಡಿಗೆ ಜಾಗೃತಿ ಜಾಥಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರೊAದಿಗೆ ಜೀವ ವೈವಿಧ್ಯ ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಸಂರಕ್ಷಿಸಬೇಕು. ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಇಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯವರಿಗೆ ಮಾತ್ರ ಸೇರಿದ್ದಲ್ಲ. ಇದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಉತ್ತಮ ಪರಿಸರವನ್ನು ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಪ್ರೇರೇಪಿಸಬೇಕು. ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಕೊಡಗಿನ ಜನತೆಯ ಪರಿಸರ ಪ್ರೇಮ ಮಾದರಿಯಾದುದು ಎಂದರು.

ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶÀ ಹೊಸಮನಿ ಪುಂಡಲೀಕ ಜಾಥಾಕ್ಕೆ ಶುಭ ಕೋರಿದರು.

ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ನಾವು ಅರಣ್ಯ, ವನ್ಯಜೀವಿಗಳು, ನದಿ, ಸರೋವರ ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಪಣ ತೊಡಬೇಕು. ಅರಣ್ಯ ಪ್ರದೇಶದಂಚಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನವ- ಪ್ರಾಣಿ ಸಂಘರ್ಷದ ನಿಯಂತ್ರಿಸಿ ಮೂಕ ಪ್ರಾಣಿಗಳಿಗೆ ತೊಂದರೆ ಆಗದಂತೆ ನಮ್ಮ ಬದುಕು ರೂಪಿಸಿಕೊಂಡು ವನ್ಯಪ್ರಾಣಿ ಸ್ನೇಹ ಜೀವನ ನಡೆಸಬೇಕಾದ ಅಗತ್ಯವಿದೆ. ವನ್ಯಜೀವಿಗಳು ಭೂಜಗತ್ತಿನ ಪ್ರಮುಖ ಜೀವಿಗಳಾಗಿವೆ. ವನ್ಯಜೀವಿಗಳ ಜತೆಗೆ ಅವುಗಳ ಆವಾಸ ಸ್ಥಾನವಾದ ಅರಣ್ಯಗಳನ್ನು ಸಂರಕ್ಷಿಸುವಲ್ಲಿ ಮಾನವ ಪಾತ್ರದ ಬಗ್ಗೆ ಹಾಗೂ ಆಹಾರ ಸರಪಳಿ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ವನ್ಯಜೀವಿ ಸಪ್ತಾಹ ಜಾಥಾ ನಡೆಸಲಾಗುತ್ತಿದೆ ಎಂದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನಿರ್ದೇಶಕ ಎಂ.ಎನ್. ವೆಂಕಟನಾಯಕ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ,

ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ. ಅಭಿಷೇಕ್, ಸಂದೀಪ್ ಪಿ. ಅಭಯಂಕರ್, ಸಯ್ಯದ್ ಅಹಮದ್ ಶಾ ಹುಸೈನಿ, ಪ್ರೊಬೇಷನರಿ ಐ.ಎಫ್.ಎಸ್. ಅಧಿಕಾರಿಗಳಾದ ಸೆಂದಿಲ್ ಕುಮಾರ್, ತೆಸಿನ್ ಬಾನು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅದೀಕ್ಷಕ ಬಾರಿಕೆ ದಿನೇಶ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net