

ಮಂಡ್ಯ: ವಿದ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಹವ್ಯಾಸ ಬೆಳೆಸಿಕೊಂಡು ಸ್ವಾಭಾವಿಕ ಸಂಪನ್ಮೂಲಗಳ ಉಳಿವಿಗೆ ಮುಂದಾಗಬೇಕಿದೆ ಎಂದು ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಕಿವಿಮಾತು ಹೇಳಿದರು.
ತಾಲೂಕಿನ ತುಂಬಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಆಯೋಜಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಜೀವ ಸಂಕುಲಗಳ ಉಳಿವಿಗಾಗಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಸರ್ಕಾರ ಪ್ರಸಕ್ತ ವರ್ಷ ವಿದ್ಯಾರ್ಥಿಗಳ ಮೂಲಕ ಅರಣ್ಯ ಸಾಕ್ಷರತೆ ಮತ್ತು ಜನರ ಸಹಭಾಗಿತ್ವದಲ್ಲಿ ಸಾಮೂಹಿಕ ಹೊಣೆಗಾರಿಕೆಯಿಂದ 5 ಕೋಟಿಗೂ ಹೆಚ್ಚು ಗಿಡ ನೆಡುವ ಜವಾಬ್ದಾರಿಯನ್ನು ಇಟ್ಟುಕೊಂಡಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಜೀವ ವೈವಿಧ್ಯತೆಯ ಉಳಿವು ಮನುಕುಲಕ್ಕೆ ಪೂರಕವಾಗಿರುತ್ತದೆ. ಪ್ರಕೃತಿ ಅಸಮತೋಲನದಿಂದಾಗಿ ವಾಡಿಕೆ ಮಳೆ ಬೀಳದೆ ಸಾಕಷ್ಟು ರೋಗ ರುಜಿನಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಜೀವನಮಟ್ಟ ಸುಧಾರಣೆಗೆ ಮಳೆ ಮತ್ತು ಪ್ರಕೃತಿ ತೀರಾ ಅವಶ್ಯಕತೆ ಇದೆ. ಹಸಿರು ಹೊದಿಕೆಯನ್ನು ಹೆಚ್ಚು ಮಾಡಿದಷ್ಟು ಭೂಮಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಮಣ್ಣಿನ ತೇವಾಂಶದಲ್ಲಿ ಹೆಚ್ಚಳವಾದಾಗ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಕೃತಿ ಉಳಿವಿಗಾಗಿ ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಚೈತ್ರಾ ಮಾತನಾಡಿ, ಜೀವ ಸಂಕುಲಗಳ ಉಳಿವಿಗೆ ಪೂರಕವಾಗಿ ಭೂಮಿಗೆ ಹಸಿರು ಹೊದಿಕೆ ಮಾಡಬೇಕಿದೆ. ಅರಣ್ಯ ಇಲಾಖೆಯು ಈ ಸಂಬಂಧ ಶಾಲಾ ಕಾಲೇಜು, ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಹಸಿರು ಹೊದಿಕೆ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದರು.
ಶಾಲೆಯ ಪ್ರಾಂಶುಪಾಲೆ ಚೇತನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪವಲಯ ಅರಣ್ಯಾಧಿಕಾರಿ ಸುರೇಶ್, ಇಲಾಖೆ ಸಿಬ್ಬಂದಿ ಹಾಜರಿದ್ದರು.