

ಹುಲಸೂರು: ಎರಡು ಸಮುದಾಯ ಯುವಕರು ಕ್ಷುಲ್ಲಕ ಕಾರಣಕ್ಕಾಗಿ ಮಾರಕಾಸ್ತ್ರಗಳಿಂದ ಹೊಡಿದಾಡಿಕೊಂಡ ಘಟನೆ ವಾಂಜರಖೇಡ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಮುಸ್ಲಿಂ ಯುವಕರು ಅವಾಚ್ಯ ಶಬ್ದ ಬಳಕೆ ಮಾಡಿ ನಮ್ಮನ್ನು ಥಳಿಸಿದ್ದಾರೆ. ನಮ್ಮ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕಾನೂನಿನ ಪ್ರಕಾರ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಜಾಲಿಂದರ ಕಾಂಬಳೆ ಮೇಹಕರ ಠಾಣೆಗೆ ದೂರು ಸಲ್ಲಿಸಿದ್ದು, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಗ್ರಾಮದ ಡಾ.ಅಂಬೇಡ್ಕರ್ ಸಮುದಾಯ ಭವನದ ಪರಿಸರದಲ್ಲಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಶನಿವಾರ ಎರಡು ಸಮುದಾಯದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸಿದರು. ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಹೊಂದಾಣಿಕೆ ಮಾಡಿಕೊಂಡು ಅನ್ಯುನ್ಯವಾಗಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ಸಿಸಿ ಕ್ಯಾಮರಾ ಇಲ್ಲದೆ ಹಲವಾರು ಸಮಸ್ಯೆಗಳನ್ನು ಕಾಣುತ್ತಿವೆ. ಸ್ಥಳೀಯ ಗ್ರಾಪಂನವರು ಪ್ರಮುಖ ಬಡಾವಣೆ, ವ್ಯಾಪಾರ ಕೇಂದ್ರಗಳ ಮುಂಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸ್ಥಳದಲ್ಲಿದ್ದ ಸದಸ್ಯರಿಗೆ ಸೂಚಿಸಿದರು.
ಪಿಎಸ್‌ಐ ಶಿವಕುಮಾರ ಬಳತೆ, ಶ್ರೀಶೈಲ ಗಿರಿ, ನವನಾಥ ಬೋಲಸೂರೆ, ಸಿರಾಜ್ ಪಟೇಲ್, ಉಸ್ಮಾನ್ ಮದರಸಾಬ್, ಜಾಲಿಂದರ ಕಾಂಬಳೆ, ವಿದ್ಯಾಸಾಗರ ಕಾಂಬಳೆ, ಲಕ್ಷ್ಮಣ ವಾಗಮಾರೆ, ರಾಹುಲ್ ಕಾಂಬಳೆ, ಪರಮೇಶ್ವರ ಕಾಂಬಳೆ, ಕಿಶೋರ ಕಾಂಬಳೆ, ಮೋಹಿನ್ ಪಟೇಲ್, ಹನು ಪಟೇಲ್ ಇತರರಿದ್ದರು.