ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು ಬೇಡ

6-klr-2
Published on

ಕೋಲಾರ: ಎತ್ತಿನಹೊಳೆ ಯೋಜನೆಯಡಿ ಡಿಪಿಆರ್(ವಿಸ್ತತ ಯೋಜನಾ ವರದಿ)ನಲ್ಲಿ ಇಲ್ಲದಿರುವ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ತೀರ್ಮಾನ ಕೈಬಿಡಬೇಕು ಎಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ಹೊಳಲಿ ಪ್ರಕಾಶ್ ಸರ್ಕಾರವನ್ನು ಆಗ್ರಹಿಸಿದರು.

ವಿಶ್ವೇಶ್ವರಯ್ಯ ನೀರಾವರಿ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಡಿಪಿಆರ್‌ನಲ್ಲಿ 24 ಟಿಎಂಸಿ ನೀರು ಪ್ರಸ್ತಾಪಿಸಲಾಗಿದೆ. ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಕೆಲ ಭಾಗಕ್ಕೆ ನೀರು ಹರಿಸಲಾಗುತ್ತದೆಯಾದರೂ ವಾಣಿವಿಲಾಸ ಸಾಗರಕ್ಕೆ ನೀರು ತುಂಬಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಿ, ಎತ್ತಿನಹೊಳೆ ನೀರು ಹರಿಸಿದ್ದೇ ಆದಲ್ಲಿ ಯೋಜನೆಯ ಕಡೇ ಹಂತದಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಯದು ಎಂದು ಕಳವಳ ವ್ಯಕ್ತಪಡಿಸಿದರು.

ಕೆಸಿ ವ್ಯಾಲಿಯಿಂದ ಒಟ್ಟು 440 ಎಂಎಲ್‌ಡಿ ನೀರು ಹರಿಸಬೇಕಿತ್ತು. ಕೋಲಾರ ಮತ್ತು ಮಾಲೂರಿನ 51 ಕೆರೆಗಳಿಗೆ ಶೇ. 75ರಷ್ಟು ಮಾತ್ರ ನೀರು ತುಂಬಿಸಲಾಗಿದೆ. 220 ಎಂಎಲ್‌ಡಿಯಷ್ಟು ಮಾತ್ರ ನೀರು ಹರಿಯುತ್ತಿದೆ. ಅಕ್ರಮವಾಗಿ ಪಂಪ್ ಮೋಟಾರ್ ಇಟ್ಟು ನೀರೆತ್ತುವವರ ಮೇಲೆ ನಿಗಾ ಇಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಕೆಸಿ ವ್ಯಾಲಿ ಯೋಜನೆಗೆ ಒಳಪಡದ ತಾವರೆಕೆರೆ ಭಾಗದಲ್ಲೂ ಪೈಪ್ ಹಾಕಿ ಕೆರೆಗಳಿಗೆ ನೀರು ಹರಿಸುತ್ತಿರುವುದರಿಂದ ಕೋಲಾರಕ್ಕೆ ಹರಿಯುವ ನೀರಿನ ಪ್ರಮಾಣ ಕುಸಿದಿದೆ. ಕೆರೆಗಳಲ್ಲಿ ಬೆಳೆದಿದ್ದ ಮರ ಟಾವು ವೇಳೆ ಬೇರುಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಟೆಂಡರ್‌ನ ಷರತ್ತುಗಳು ಉಲ್ಲಂಘನೆಯಾಗಿದ್ದರೂ ಅರಣ್ಯ ಇಲಾಖೆ ಕ್ರಮ ವಹಿಸಿಲ್ಲ ಎಂದರು.

ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಎತ್ತಿನಹೊಳೆ ಯೋಜನೆಯಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿದರೆ ಜಿಲ್ಲೆಗೆ ನೀರು ಹರಿಯುವ ಸಾಧ್ಯತೆ ಇಲ್ಲ. ಹೀಗಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಜನತೆ ಎಚ್ಚೆತ್ತುಕೊಂಡು ಹೋರಾಟಕ್ಕಿಳಿಯಬೇಕು, ಮುಂದಿನ ದಿನಗಳಲ್ಲಿ ಹೋರಾಟವನ್ನು ಬೇರೆ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿ ಸಂಚಾಲಕ ಕುರುಬರಪೇಟೆ ವೆಂಕಟೇಶ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚಂಬೆ ರಾಜೇಶ್, ನಳಿನಿ, ಕಲ್ವಮಂಜಲಿ ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ಕೆ.ಎನ್.ತ್ಯಾಗರಾಜ್, ದಲಿತ್ ನಾರಾಯಣಸ್ವಾಮಿ, ಖಾದ್ರಿಪುರ ಬಾಬು, ವಿ.ಎನ್. ನಾಗರಾಜ್, ಚೇತನ್‌ಬಾಬು ಗೋಷ್ಠಿಯಲ್ಲಿ ಹಾಜರಿದ್ದರು.

ಕೇಸ್ ವಾಪಸ್‌ಗೆ ಆಗ್ರಹ: ನೀರಾವರಿ ಹೋರಾಟಗಾರರ ಮೇಲಿನ ಪ್ರಕರಣ ಕೈ ಬಿಡುವುದಾಗಿ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೆ.ಆರ್. ರಮೇಶ್‌ಕುಮಾರ್ ಭರವಸೆ ನೀಡಿದ್ದರು. ಅಂದಿನ ಸಿಎಂ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಾವರಿ ಹೋರಾಟಗಾರರ ಮೇಲೆ ಹೂಡಿರುವ ಕೇಸು ವಾಪಸ್ ಪಡೆಯಬೇಕೆಂದು ಸಂಚಾಲಕ ಹೊಳಲಿ ಪ್ರಕಾಶ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net