ಬೀರೂರು ಪುರಸಭೆಗೆ ವನಿತಾ ನೂತನ ಸಾರಥಿ

27 BIRUR 01 (1)
Published on

ಬೀರೂರು: ಬೀರೂರು ಪುರಸಭೆ ಅಧ್ಯಕ್ಷೆಯಾಗಿ ಜೆಡಿಎಸ್,ಬಿಜೆಪಿ ಬೆಂಬಲಿತ ಅಭ್ಯರ್ಥಿ ವನಿತಾ ಮತ್ತು ಉಪಾಧ್ಯಕ್ಷರಾಗಿ ಎನ್.ಎಂ.ನಾಗರಾಜ್ ಆಯ್ಕೆಯಾದರು.
23 ಸದಸ್ಯರ ಬಲದ ಪುರಸಭೆಯಲ್ಲಿ ಬಿಜೆಪಿಯ 11, ಕಾಂಗ್ರೆಸ್‌ನ 9, ಜೆಡಿಎಸ್ 2 ಹಾಗೂ ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಜೆಡಿಎಸ್ ಸದಸ್ಯೆ ವನಿತಾ ಹಾಗೂ ಕಾಂಗ್ರೆಸ್‌ನ ಸದಸ್ಯೆ ಜ್ಯೋತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಎನ್.ಎಂ.ನಾಗರಾಜ್ ಮತ್ತು ಕಾಂಗ್ರೆಸ್ ಬೆಂಬಲಿತ ಟಿ.ಗಂಗಾಧರ್ ಉಮೇದುವಾರಿಕೆ ಸಲ್ಲಿಸಿದ್ದರು.
ಪುರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಜ್ಯೋತಿ ಮತ್ತು ಟಿ.ಗಂಗಾಧರ್ ತಲಾ 9 ಮತ ಪಡೆದು ಪರಾಭವ ಗೊಂಡರೆ ವನಿತಾ ಹಾಗೂ ಎನ್.ಎಂ.ನಾಗರಾಜ್ ತಲಾ 14 ಮತಗಳನ್ನು ಪಡೆದು ವಿಜೇತರಾದರು. ಮೊದಲ ಅವಧಿಯಂತೆ ಎರಡನೇ ಅವಧಿಯಲ್ಲೂ ಅದೇ ರೀತಿ ಮೈತ್ರಿ ಧರ್ಮ ಪಾಲನೆಯಾಗಿದ್ದರಿಂದ ಜೆಡಿಎಸ್‌ನ ವನಿತಾ ಹಾಗೂ ಬಿಜೆಪಿಯ ಎನ್.ಎಂ.ನಾಗರಾಜ್ ಅಧ್ಯಕ್ಷ , ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿತ್ತು. ಬಿಜೆಪಿ, ಜೆಡಿಎಸ್‌ನ ಎಲ್ಲ ಸದಸ್ಯರೂ ಹಾಜರಿದ್ದು, ತಮ್ಮ ಬೆಂಬಲ ಸೂಚಿಸಿದರು. ಚುನಾವಣಾಧಿಕಾರಿಯಾಗಿ ಕಡೂರು ತಹಸೀಲ್ದಾರ್ ಪೂರ್ಣಿಮಾ ಕಾರ್ಯನಿರ್ವಹಿಸಿದ್ದರು.
ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ತೆರೆದ ವಾಹನದಲ್ಲಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೆರವಣಿಗೆ ನಡೆಸಿದರು.
ಮುಖಂಡರಾದ ಸವಿತಾ ರಮೇಶ್, ವಿಕ್ರಂ, ಕಡೂರು ಮಂಡಲ ಅಧ್ಯಕ್ಷ ದಯಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ಹುಲ್ಲೇಹಳ್ಳಿ ಲಕ್ಷ್ಮಣ್, ಬಿದಿರೆ ಜಗದೀಶ್, ಎಸ್.ಎಲ್.ಮಂಜುನಾಥ್, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಪ್ರೇಮ್, ಬಾವಿಮನೆ ಮಧು, ಮತ್ತು ಕಾಂಗ್ರೆಸ್ ಬೀರೂರು ಬ್ಲಾಕ್ ಅಧ್ಯಕ್ಷ ಆಸಂದಿ ಕಲ್ಲೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net