ಸತ್ಪ್ರಜೆಗಳಾಗಲು ಅಗತ್ಯ ಉತ್ತಮ ಶಿಕ್ಷಣ : ದೇವದಾಸ್ ಶೆಟ್ಟಿ ಹೇಳಿಕೆ

New Project (4)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ ಶಿಕ್ಷಣ ಸಂಸ್ಥೆಗಳು. ಪಾಲಕರಿಗೆ ಮಕ್ಕಳ ಬಗ್ಗೆ ಎಷ್ಟು ಕಾಳಜಿ ಇದೆಯೋ ಅಷ್ಟೇ ಕಾಳಜಿ ಶಿಕ್ಷಕರಿಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಉತ್ತಮ ಪ್ರಜೆಗಳಾಗಿಸಬೇಕಾಗಿದೆ. ಶಿಕ್ಷಕ ವೃತ್ತಿ ಸಮಾಜದ ಶ್ರೇಷ್ಠ ವೃತ್ತಿ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹೇಳಿದರು.

ಮಂಗಳವಾರ ಬೆಳ್ತಂಗಡಿ ಹಳೆಕೋಟೆ ವಾಣಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಜತೆಗೆ ಉತ್ತಮ ದೇಹದಾರ್ಢ್ಯವನ್ನು ಹೊಂದಬೇಕು. ವಾಣಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸುತ್ತಿದೆ ಎಂದರು.

ಬಂಟ್ವಾಳ ಎಸ್‌ವಿಎಸ್‌ಪಿ ಯು ಕಾಲೇಜಿನ ಪ್ರಾಂಶುಪಾಲ ಗಂಗಾಧರ ಅಳ್ವ ಶಾಲಾ ಮ್ಯಾಗಜಿನ್ ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣದ ಗುಣಮಟ್ಟ ಕುಸಿಯಿತೆಂದರೆ ದೇಶದ ಪ್ರಗತಿ ಕುಂಠಿತವಾಯಿತು ಎಂದರ್ಥ. ಅದಕ್ಕಾಗಿ ಮಕ್ಕಳ ಪರಿಪೂರ್ಣ ಬೆಳವಣಿಗೆ ಸಹಕಾರಿಯಾಗುವ ಶಿಕ್ಷಣ ಸಿಗಬೇಕು. ಇಂದು ಅಂಕಗಳಿಗೆ ಸೀಮಿತವಾಗಿ ಶಿಕ್ಷಣ ಬೆಳೆಯುತ್ತಿರುವುದು ವಿಷಾದನೀಯ. ಮಕ್ಕಳು ಒತ್ತಡಕ್ಕೆ ಒಳಗಾಗಿ ದುಶ್ಚಟಕ್ಕೆ ಬಲಿಯಾಗುವ ಸಂಖ್ಯೆ ಹೆಚ್ಚಿದೆ.ಇದಕ್ಕೆ ಕಡಿವಾಣ ಅಗತ್ಯ ಎಂದರು.

ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಪದ್ಮಗೌಡ, ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ, ತೆರಿಗೆ ಸಲಹೆಗಾರ ಆನಂದ ಗೌಡ, ಪಾಲಕರ ಸಂಘದ ಅಧ್ಯಕ್ಷ ಮೋಹನ್ ಗೌಡ, ಶಾಲಾ ನಾಯಕಿ ಮಾನ್ಯ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣ ಸ್ವಾಗತಿಸಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಹಾಸಿನಿ ವರದಿ ವಾಚಿಸಿದರು. ಶಿಕ್ಕಕಿಯರಾದ ಮೋಹನಾಂಗಿ, ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net