ವಂದೇ ಮಾತರಂ ಸಾಮೂಹಿಕ ಗಾಯನ,  800ಕ್ಕೂ ಹೆಚ್ಚು ಜನರು ಭಾಗಿ

IMG_20250125_204842_303.jpg
Published on

ಹುಬ್ಬಳ್ಳಿ: ವಂದೇ ಮಾತರಂ ಗೀತೆಯಲ್ಲಿ ಭಾರತಮಾತೆಯ ವರ್ಣನೆ ಇದೆ, ಕೊನೆಯ ಸಾಲುಗಳಲ್ಲಿ ದೇವಿ ದುರ್ಗೆ, ಸರಸ್ವತಿ, ಲಕ್ಷ್ಮಿಗೆ ಹೋಲಿಕೆ ಮಾಡಲಾಗಿದೆ. ಇಂತಹ ಹಾಡನ್ನು ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಕಾಂಗ್ರೆಸ್ ನವರು ಜಾತ್ಯತಿತತೆ ಹೆಸರಿನಲ್ಲಿ ಹಲವು ಭಾಗ ತುಂಡರಿಸಿ ಸಪ್ಪೆ ಭಾಗವನ್ನು ಉಳಿಸಿಕೊಂಡು ಅನಾಚಾರ ಮಾಡಿದರು ಎಂದು ಆರ್ ಎಸ್ ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ಇಲ್ಲಿಯ ಮೂರುಸಾವಿರ ಮಠ ಆವರಣದಲ್ಲಿ ಸಂಸ್ಕೃತಿ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ವಂದೇ ಮಾತರಂ ರಾಷ್ಟ್ರ ಗಾನವನ್ನು ಸಾಮೂಹಿಕವಾಗಿ ಹಾಡುವ ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಜನಗಣಮನ ಗೊತ್ತಿಲ್ಲದ ಕಾಲದಲ್ಲಿ ಇದೇ ರಾಷ್ಟ್ರಗೀತೆ ಆಗಿತ್ತು. ಹಲವು ಮನಹನೀಯರು ವಂದೇ ಮಾತರಂ ಎನ್ನುತ್ತಲೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರು. ಪ್ರಾಣ ತ್ಯಾಗ ಮಾಡಿದರು. ಆದರೆ, ಹಿಂದು ಮುಸ್ಲಿಂ ಭಾಯಿಭಾಯಿ ಎಂದರೆ ಮಾತ್ರ ಸ್ವರಾಜ್ಯ ಲಭಿಸುತ್ತದೆ ಎಂದು ತಪ್ಪು ಕಲ್ಪನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತುಷ್ಟೀಕರಣದ ಭಾಗವಾಗಿ ವಂದೇ ಮಾತರಂಗೆ ವಿರೋಧ ಮಾಡಿದರು. ಬ್ರಿಟಿಷರು ಇದನ್ನು ನಿಷೇಧ ಮಾಡಿದ್ದರು. ಅಷ್ಟೊಂದು ಶಕ್ತಿಶಾಲಿ ಹಾಡನ್ನು ಇದೀಗ ದೇಶದ ಎಲ್ಲ ಕಡೆ ಹಾಡುವ ಮೂಲಕ ಮತ್ತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಈ ಹಾಡಿಗೆ 150 ವರ್ಷ ಆಗಿದೆ. ಜನರ ಅಂತಃಕರಣದಿಂದ ಹೊರಹೊಮ್ಮುತ್ತಿದೆ. ಇದು ದೇಶಭಕ್ತೀಗಿತೆ ಮಾತ್ರವಲ್ಲ. ಜನಗಣಮನಕ್ಕಿರುವ ಮಾನ್ಯತೆ ಇದಕ್ಕೂ ಇದೆ. ಗಣರಾಜ್ಯೋತ್ಸದಂದೇ ಘೋಷಿಸಲಾಗಿದೆ. ಭಾರತ ಎಂದರೇನು ಎಂದು ತಿಳಿಸುವುದಕ್ಕಾಗಿಯೇ ಸ್ವಾತಂತ್ರ್ಯ ಹೋರಾಟ ನಡೆಯಿತು. ಭಾರತ ಮಾತೆಯ ಮಕ್ಕಳೆಂಬುದನ್ನು ಮರೆಸಲು ಇಂಗ್ಲಿಷರು ಇಂಡಿಯಾ ಎಂದರು ಎಂದು ಇತಿಹಾಸ ಬಿಚ್ಚಿಟ್ಟರು.

ಅತಿಥಿಯಾಗಿದ್ದ ಸಂಶೋಧಕಿ ಡಾ. ಸಂಗೀತ ಕೋಲವೇಕರ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಜನರನ್ನು ಒಂದುಗೂಡಿಸಲು ಬಂಕಿಮಚಂದ್ರ ಚಟರ್ಜಿ ಅವರು ವಂದೇ ಮಾತರಂ ರಚಿಸಿದರು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಹಾಡು ಜನರನ್ನು ಜಾಗ್ರತಗೊಳಿಸುತ್ತದೆ. ಸುಸಂಸ್ಕೃತ ಮಕ್ಕಳಿಂದ ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.

ನಿತ್ಯ ಬೆಳಗಿನಿಂದಲೇ ಸಂಸ್ಕೃತಿ ಆಚರಣೆ ಆರಂಭವಾಗುತ್ತದೆ. ವಿಜ್ಞಾನ ಮತ್ತು ವಿದ್ಯೆ ಸಮ್ಮಿಳಿತವಾಗಬೇಕು. ನಮ್ಮ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಪೂರ್ವಜರು ವೈಜ್ಞಾನಿಕ ಹಿನ್ನೆಲೆಯಲ್ಲಿ ಸಂಸತಿ ರೂಪಿಸಿದ್ದಾರೆ ಎಂದರು.

ಸುಮಾರು 800ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ವಂದೇ ಮಾತರಂ ಹೇಳಿದರು.

ಸಂಘಟನೆಯ ಅರುಣಾ ದೇಶಪಾಂಡೆ, ಶಾಂತಾ ವೇರ್ಣೇಕರ್, ಸಂದೀಪ ಬೂದಿಹಾಳ, ಸತೀಶ ಮೂರೂರು, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net