

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಯೋಧ್ಯೆ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ ಬಳಿಕ ಮಂಗಳೂರಿನಿಂದ ಮಡಗಾಂವ್(ಗೋವಾ)ಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೆಂಟ್ರಲ್ ರೈಲು ನಿಲ್ದಾಣದಿಂದ ಶನಿವಾರ ಮಧ್ಯಾಹ್ನ 12.12ಕ್ಕೆ ಹೊರಟಿತು.
ಈ ವೇಳೆ ಮಾತನಾಡಿದ ದ.ಕ.ಸಂಸದರು, 2024ರ ಮಾರ್ಚ್ ವೇಳೆಗೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ನಂತರ ಏಪ್ರಿಲ್‌ನಲ್ಲಿ ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭವಾಗಲಿದೆ. ಮಂಗಳೂರು-ಕೊಚ್ಚಿ ನಡುವೆ ವಂದೇ ಭಾರತ್ ರೈಲಿಗೆ ಬೇಡಿಕೆ ಇದೆ. 2014 ಬಳಿಕ ನರೇಂದ್ರ ಮೋದಿಯವರ ಆಡಳಿತದಿಂದ ಮಹತ್ತರ ಪರಿವರ್ತನೆ ಕಂಡ ಹಲವಾರು ಕ್ಷೇತ್ರಗಳಲ್ಲಿ ರೈಲ್ವೆಯೂ ಸೇರಿದೆ ಎಂದರು.
ಪ್ರಧಾನಿ ಫ್ಲ್ಯಾಗ್ ಆಫ್ ಮಾಡಿದ ಮಂಗಳೂರು-ಮಡಗಾಂವ್ ರೈಲಿನಲ್ಲಿ ಲೋಕೋ ಪೈಲಟ್‌ಗಳಾಗಿ ಸಿ.ದಿನೇಶನ್ ಮತ್ತು ಎಸ್.ಎಚ್. ಮತ್ತು ಸಹಾಯಕ ಲೋಕೋ ಪೈಲಟ್‌ಗಳಾಗಿ ಯೋಗೇಶ್ ಬಂದೇಕರ್ ಮತ್ತು ಗಿರೀಶ್ ಕಾರ್ಯನಿರ್ವಹಿಸಿದರು. ಕೇಂದ್ರೀಯ ವಿದ್ಯಾಲಯ, ಚಿನ್ಮಯ ವಿದ್ಯಾಲಯ, ಕೇರಳ ಸಮಾಜಂ ಶಾಲೆಯ ವಿದ್ಯಾರ್ಥಿಗಳು, ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಿದರು. ದಕ್ಷಿಣ ಕನ್ನಡ ಸಂಸದರು, ಶಾಸಕರಾದ ಡಿ.ವೇದವ್ಯಾಸ ಕಾಮತ್, ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಇತರ ಪ್ರಯಾಣಿಕರ ಜತೆ ರೈಲಿನಲ್ಲಿ ಪ್ರಯಾಣಿಸಿದರು. ಸಂಸದರು ಹಾಗೂ ಶಾಸಕರು ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ದಕ್ಷಿಣ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿದರು. ಎಡಿಆರ್‌ಎಂ ಜಯಕೃಷ್ಣನ್, ಉಪ ಮೇಯರ್ ಸುನೀತಾ ಉಪಸ್ಥಿತರಿದ್ದರು.
.............
ಸೆಲ್ಫಿಗೆ ಮುಗಿಬಿದ್ದ ಜನ
ಉದ್ಘಾಟನಾ ಸಮಾರಂಭದ ಪ್ರಯುಕ್ತ ಶನಿವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಒದಗಿಸಲಾಗಿತ್ತು. ಮದುಮಗಳಂತೆ ನಿಂತಿದ್ದ ವಂದೇಭಾರತ್ ಎಕ್ಸ್‌ಪ್ರೆಸ್ ಜತೆ ಫೋಟೋ, ಸೆಲ್ಫಿ ತೆಗೆದುಕೊಳ್ಳಲು, ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲು ಮಹಿಳೆಯರು, ಮಕ್ಕಳು, ಅಧಿಕಾರಿಗಳು ಸಹಿತ ಎಲ್ಲ ವಿಭಾಗದ ಜನ ಮುಗಿ ಬೀಳುವುದು ಕಂಡುಬಂತು.
.............
ಎರಡು ಗಂಟೆ ವಿಳಂಬ
ಪ್ರಧಾನಿ, ನಿಗದಿತ ಸಮಯಕ್ಕಿಂತ 2.12 ಗಂಟೆ ವಿಳಂಬವಾಗಿ ಹೊಸ ವಂದೇ ಭಾರತ್ ರೈಲಿಗೆ ಅಯೋಧ್ಯಾ ಧಾಮ ಜಂಕ್ಷನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಫ್ಲ್ಯಾಗ್‌ಆಫ್ ಮಾಡಿದರು. ಪ್ರಧಾನಿ ರೋಡ್ ಶೋ ಇದಕ್ಕೆ ಕಾರಣ. ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ರೈಲು ಉಡುಪಿಗೆ ಮಧ್ಯಾಹ್ನ 1.30, ಕಾರವಾರಕ್ಕೆ 3.30 ಹಾಗೂ ಮಡಗಾಂವ್‌ಗೆ 4.23ಕ್ಕೆ ತಲುಪಿತು.