ಪ್ರಯಾಣಿಕರನ್ನು ಸೆಳೆಯುತ್ತಿರುವ ವಂದೇ ಭಾರತ್ ರೈಲು

New VB TRAin New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡದಿಂದ ಬೆಂಗಳೂರು ಹಾಗೂ ಪುಣೆಗೆ ಸಂಚರಿಸುವ ಪ್ರತ್ಯೇಕ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಆದಾಯ ಗಳಿಕೆಯಲ್ಲಿಯೂ ಈ ಎರಡೂ ರೈಲುಗಳು ಮುಂಚೂಣಿಯಲ್ಲಿವೆ.

ಎರಡೂ ವಂದೇ ಭಾರತ್ ರೈಲುಗಳಲ್ಲಿ ಶೇ. 85 ರಿಂದ 100ರವರೆಗೆ ಸೀಟುಗಳು ಭರ್ತಿಯಾಗುತ್ತಿವೆ. ರೈಲುಗಳಲ್ಲಿನ ಸೌಲಭ್ಯ, ವೇಗದಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ವಂದೇ ಭಾರತ್ ರೈಲು ಜನಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಸಂಚರಿಸುವ 10 ವಂದೇ ಭಾರತ್ ರೈಲುಗಳಲ್ಲಿ 8 ರೈಲುಗಳು ನೈಋತ್ಯ ರೈಲ್ವೆ ವಲಯಕ್ಕೆ ಸೇರಿವೆ.

ಕಳೆದ ಒಂದೂವರೆ ವರ್ಷದಿಂದ ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು, ಕಳೆದ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಸುಮಾರು 23 ಕೋಟಿ ರೂ. ಆದಾಯ ಗಳಿಸಿದೆ. ಈ ಅವಧಿಯಲ್ಲಿ 2.25 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಇದೇ ಅವಧಿಯಲ್ಲಿ ಧಾರವಾಡ -ಬೆಂಗಳೂರು ಮಧ್ಯೆ ಶೇ.88 ರಷ್ಟು ಆಸನಗಳು ಭರ್ತಿಯಾಗಿದ್ದರೆ, ಬೆಂಗಳೂರು -ಧಾರವಾಡ ಮಧ್ಯೆ ಶೇ.84 ರಷ್ಟು ಸೀಟುಗಳು ಭರ್ತಿಯಾಗಿವೆ. ವಾರಂತ್ಯವಂತೂ ವಂದೇ ಭಾರತ್ ರೈಲುಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿನಿಂದ ಕಳೆದ ನಾಲ್ಕು ತಿಂಗಳಲ್ಲಿ 4.5 ಕೋಟಿ ರೂ. ಆದಾಯ ಗಳಿಕೆಯಾಗಿದೆ. ಇಲ್ಲಿಯವರೆಗೆ 34 ಸಾವಿರ ಜನ ಪ್ರಯಾಣ ಮಾಡಿದ್ದಾರೆ. ಹುಬ್ಬಳ್ಳಿಪುಣೆಯಿಂದ ಶೇ.76 ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದರೆ, ಪುಣೆ-ಹುಬ್ಬಳ್ಳಿ ಮಧ್ಯೆ ಶೇ. 82 ರಷ್ಟು ಸೀಟುಗಳು ಭರ್ತಿಯಾಗುತ್ತಿವೆ ಎಂದು ನೈಋತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್​ನಲ್ಲಂತೂ ಶೇ.88 ರಷ್ಟು ಸೀಟುಗಳು ಭರ್ತಿಯಾಗಿದ್ದವು.

ಕಳೆದ ಸೆಪ್ಟೆಂಬರ್​ನಿಂದ ಸಂಚಾರ ಪ್ರಾರಂಭಿಸಿರುವ ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಹಬ್ಬಗಳ ಸಂದರ್ಭದಲ್ಲಂತೂ ಧಾರವಾಡ-ಬೆಂಗಳೂರು ಮಧ್ಯದ ವಂದೇ ಭಾರತ್ ರೈಲು ಸಂಪೂರ್ಣ ಭರ್ತಿಯಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net