ವಿಜೃಂಭಣೆಯ ದೊಡ್ಡಮ್ಮತಾಯಿ ಬಂಡಿ ಜಾತ್ರೆ

05 CHN-11A
Published on

ಚಾಮರಾಜನಗರ: ತಾಲೂಕಿನ ಕಸ್ತೂರು ಗ್ರಾಮದಲ್ಲಿ ಭಾನುವಾರ ಶ್ರೀದೊಡ್ಡಮ್ಮತಾಯಿ ಬಂಡಿ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ತಾಲೂಕಿನ ಮರಿಯಾಲ, ಕೆಲ್ಲಂಬಳ್ಳಿ, ಭೋಗಾಪುರ, ಬಸವನಪುರ, ಹೊನ್ನೇಗೌಡನಹುಂಡಿ, ಆನಹಳ್ಳಿ, ಮೂಕನಹಳ್ಳಿ, ಸಪ್ಪಯ್ಯನಪುರ, ಚಿಕ್ಕಹೊಮ್ಮ, ದೊಡ್ಡ ಹೊಮ್ಮ, ತೊರವಳ್ಳಿ, ಕಲ್ಲಹಳ್ಳಿ, ಮರಿಯಾಲದ ಹುಂಡಿ, ಹೆಗ್ಗವಾಡಿ, ಕರಡಿಮೋಳೆ, ಕಿರಗಸೂರು, ಹೆಗ್ಗವಾಡಿಪುರ, ಐತಾಳಪುರ, ಅಂಕಶಯ್ಯನಪುರ, ದಾಸನೂರು ಸೇರಿದಂತೆ ಇತರೆ ಗ್ರಾಮಗಳ ಜನರು ಕಸ್ತೂರುನ ಹೊರವಲಯದಲ್ಲಿರುವ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದೊಡ್ಡಮ್ಮತಾಯಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆ ಹಾಗೂ ವೃದ್ಧರು ಅಲಂಕೃತ ಎತ್ತಿನಗಾಡಿ, ದ್ವಿಚಕ್ರ ವಾಹನಗಳು, ಆಟೋ, ಕಾರುಗಳಲ್ಲಿ ಕಸ್ತೂರಿಗೆ ಆಗಮಿಸಿ ಜಾತ್ರೋತ್ಸವದಲ್ಲಿ ಪಾಲ್ಗೊಂಡರು. ದೊಡ್ಡಮ್ಮ ತಾಯಿ ಭಕ್ತರು ಪಂಜು ಹಿಡಿದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪಂಜು ಹರಕೆ ತೀರಿಸಿದರು. ದನ ಕರುಗಳ ಕೊಂಬುಗಳಿಗೆ ಪಂಜು ಕಟ್ಟಿ ಪ್ರದಕ್ಷಿಣೆ ಹಾಕಿಸಿದರು. ನಂತರ ದೇವಾಲಯದ ಎದುರು ಧೂಪ ಹಾಕಿದರು.
ಹದಿನಾರು ಗ್ರಾಮಗಳ ಜನರು ತಮ್ಮ ಗ್ರಾಮಗಳಲ್ಲಿ ಬಂಡಿಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿ ಕಸ್ತೂರಿನ ದೊಡ್ಡಮ್ಮತಾಯಿ ದೇವಾಲಯಕ್ಕೆ ಕಳುಹಿಸಿಕೊಟ್ಟರು. ಬಣ್ಣದ ಬಟ್ಟೆ, ಕಾಗದ, ಹೂ ಹಾರ, ಎಳನೀರು, ಹೊಂಬಾಳೆಗಳಿಂದ ಶೃಂಗರಿಸಿದ ಬಂಡಿಗಳು ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಮಂಟಪದ ಬಳಿಗೆ ಆಗಮಿಸಿದವು.

ಸಂಪ್ರದಾಯದಂತೆ ಮೊದಲು ಆಗಮಿಸಿದ ಕಸ್ತೂರುನ ಅಲಂಕೃತ ಬಂಡಿಗೆ ಪೂಜೆ ನೆರವೇರಿಸಿ ಈಡುಗಾಯಿ ಒಡೆದು ಚಾಲನೆ ನೀಡಲಾಯಿತು. ನಂತರ ಬಂಡಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಸ್ವಗ್ರಾಮದತ್ತ ತೆರಳಿತು. ಬಳಿಕ ಇತರೆ ಗ್ರಾಮಗಳ ಬಂಡಿಗಳು ದೇವಾಲಯದ ಬಳಿಗೆ ಆಗಮಿಸಿ ಪೂಜೆ ಸಲ್ಲಿಸಿ ಸ್ವಗ್ರಾಮಗಳತ್ತ ತೆರಳಿದವು.

ರಂಗೋಲಿ ಚಿತ್ತಾರ: ಹಬ್ಬದ ಅಂಗವಾಗಿ 23 ಗ್ರಾಮಗಳು ತಳಿರು ತೋರಣ, ವಿದ್ಯುತ್ ಬಣ್ಣದ ದೀಪಗಳಿಂದ ಕಂಗೊಳಿಸಿದವು. ಮನೆಯ ಬಾಗಿಲುಗಳ ಎದುರು ರಂಗೋಲಿ ಚಿತ್ತಾರ ಬಿಡಿಸಿ ಹಬ್ಬಕ್ಕೆ ಆಗಮಿಸಿದವರಿಗೆ ಸ್ವಾಗತ ಕೋರಲಾಗಿತ್ತು. ಬಂಡಿಗಳು ಕಸ್ತೂರುನತ್ತ ಹೊರಟ ನಂತರ ಗ್ರಾಮಸ್ಥರು ಜಾತ್ರೆಗೆ ಬಂದಿದ್ದ ಬಂಧುಗಳು, ಪರಿಚಯಸ್ಥರಿಗೆ ಹೋಳಿಗೆ ಹಾಗೂ ಮಾಂಸಾಹಾರ ಊಟ ಹಾಕಿ ಸಂಭ್ರಮಪಟ್ಟರು. ಜಾತ್ರೆ ನಡೆದ ಹಳ್ಳಿಗಳಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ವ್ಯಾಪಾರ ಜೋರು: ಜಾತ್ರೆಯಲ್ಲಿ ದೊಡ್ಡಮ್ಮತಾಯಿಗೆ ಪೂಜೆ, ಪಂಜಿನ ಸೇವೆ ಒಂದೆಡೆಯಾದರೆ ಸೌಂದರ್ಯ ವರ್ಧಕಗಳು, ಮಕ್ಕಳ ಆಟಿಕೆಗಳು, ಐಸ್‌ಕ್ರೀಂ, ಕಜ್ಜಾಯ, ಚಕ್ಕುಲಿ, ನಿಪ್ಪಟ್ಟು ಹಾಗೂ ಸಿಹಿ ತಿಂಡಿ ತಿನಿಸು, ಮನೆ ಬಳಕೆ ವಸ್ತುಗಳ ವ್ಯಾಪಾರ ಜೋರಾಗಿತ್ತು. ಜಾತ್ರೆಗೆ ಬಂದಿದ್ದ ಭಕ್ತರು ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿ ಖುಷಿಪಡಿಸಿದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net