ರಾಮನಗರ: ಮಾನಸಿಕ ಅಸ್ವಸ್ಥನೊಬ್ಬ ಮಂಗಳವಾರ ಜಿಲ್ಲಾಸ್ಪತ್ರೆ ಸೇರಿ ಹಲವೆಡೆ ದಾಂಧಲೆ ನಡೆಸಿ, ಸಿಬ್ಬಂದಿ ಹೌಹಾರುವಂತೆ ಮಾಡಿದ್ದಾನೆ.
ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯಲು ತುಮಕೂರಿನ ವ್ಯಕ್ತಿ ಮಂಗಳವಾರ ಜಿಲ್ಲಾಸ್ಪತ್ರೆಗೆ ಬಂದಿದ್ದ. ಇದ್ದಕ್ಕಿದ್ದಂತೆ ಕೆರಳಿದ ವ್ಯಕ್ತಿ, ಆಸ್ಪತ್ರೆಯಲ್ಲಿಯೇ ದಾಂಧಲೆ ನಡೆಸಿದ್ದಾನೆ. ಈ ವೇಳೆ ದಂತ ವಿಭಾಗಕ್ಕೆ ನುಗ್ಗಿ ಕಂಪ್ಯೂಟರ್, ಕನ್ನಡಿ, ಹೂವು ಕುಂಡ ಸೇರಿ ಹಲವು ವಸ್ತುಗಳನ್ನು ಒಡೆದು ಹಾಕಿದ್ದಾನೆ. ನಂತರ ವೈದ್ಯರ ಕೋಟ್ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಿಡಿಯಲು ಯತ್ನಿಸಿದ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆ ಬಳಿಕ ಪರಾರಿಯಾಗಿ ನಗರಸಭೆ ಬಳಿ ಇದ್ದ ಆತನನ್ನು ಮತ್ತೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಯತ್ನಿಸಿದ್ದು, ಈ ವೇಳೆಯೂ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.ನಂತರ ಎಸ್ಪಿ ಕಚೇರಿ ವೃತ್ತ ಸಮೀಪದ ಬಸ್ ನಿಲ್ದಾಣದ ಬಳಿ ಕೆಎಸ್ ಆರ್ಟಿಸಿ ಬಸ್ ಮೇಲೂ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ನ ಕಿಟಕಿ ಗಾಜು ಪುಡಿಯಾಗಿದ್ದು,ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ಕೊನೆಗೆ ಆತನನ್ನು ಸಿಬ್ಬಂದಿ ವಶಕ್ಕೆ ಪಡೆದು ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲು ಮಾಡಲು ಮುಂದಾದರು. ಈ ಬಗ್ಗೆ ಜಿಲ್ಲಾಸ್ಪತ್ರೆಯ ಶಸ ಚಿಕಿತ್ಸಕ ಡಾ.ಮಂಜುನಾಥ್ ಮಾಹಿತಿ ಹಂಚಿಕೊಂಡರು.