

ಕುಶಾಲನಗರ:
ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲೆಯ ಜೆ.ಸಿ. ಬೋಸ್ ಇಕೋ ಕ್ಲಬ್, ವಿಜ್ಞಾನ ಸಂಘ, ಎನ್.ಎಸ್.ಎಸ್.ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕದ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ವನ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಸಿ ನೆಟ್ಟು ಸಂಭ್ರಮಿಸಿದರು. ಈ ವೇಳೆ ವನ ಮಹೋತ್ಸವ ಆಚರಣೆಯ ಮಹತ್ವ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ವನ ಮಹೋತ್ಸವ ಅಥವಾ ಅರಣ್ಯ ಉತ್ಸವವು ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಜುಲೈ ತಿಂಗಳಲ್ಲಿ ಆಚರಿಸಲಾಗುವ ವಾರ್ಷಿಕ ಗಿಡ ನೆಟ್ಟು ಬೆಳೆಸುವ ಹಬ್ಬವಾಗಿದ್ದು, ಇದರಲ್ಲಿ ದೇಶದಾದ್ಯಂತ ಸಾವಿರಾರು ಮರಗಳನ್ನು ನೆಡಲಾಗುತ್ತದೆ. ಅರಣ್ಯ ಸಂರಕ್ಷಣೆಯ ಜಾಗೃತಿ ಮತ್ತು ಪರಿಸರವನ್ನು ಉಳಿಸಲು ಜುಲೈ ೧ ರಿಂದ ಜುಲೈ ೭ ರವರೆಗೆ ವನ ಮಹೋತ್ಸವ ಸಪ್ತಾಹ ಆಚರಿಸಲಾಗುತ್ತದೆ. ಮನುಷ್ಯನ ಅತಿಯಾಸೆಯಿಂದ ಪರಿಸರದಲ್ಲಿ ಗಿಡ-ಮರಗಳ ಮಾರಣ ಹೋಮ ಹೆಚ್ಚುತ್ತಿರುವುದರಿಂದ ಅರಣ್ಯ ಸಂಪತ್ತು ಕ್ಷೀಣಿಸಿದ್ದು, ಇದರಿಂದಾಗಿ ಬರಗಾಲ ಎದುರಿಸುವ ದುಃಸ್ಥಿತಿ ಬಂದೊದಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತಾ ಬರಗಾಲ ಅಳಿಸಬಹುದಾಗಿದೆ. ಅರಣ್ಯ ಬೆಳೆಸಲು ನಾವು ನಮ್ಮ ಪಾಲಿನ ಕೆಲಸವನ್ನು ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಉತ್ತಮ ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು.
ಶಾಲೆಯ ಶಿಕ್ಷಕರಾದ ಬಿ.ಎನ್. ಸುಜಾತ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಅರಣ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಪ್ರಚುರಪಡಿಸಿದರು.