ವಾಹನ ರಕ್ಷಕಿಯಾದ ವನಭದ್ರಕಾಳಿ

1GONIKOPPA
ವನಭದ್ರಕಾಳಿ ದೇವಾಲಯ
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ವನಭದ್ರಕಾಳಿ ವಾಹನ ರಕ್ಷಕಿಯಾಗಿ ನೆಲೆ ನಿಲ್ಲುವ ಮೂಲಕ ತನ್ನ ಭಕ್ತರನ್ನು ಕಾಯುತ್ತಿದ್ದಾಳೆ.

ಹಾತೂರು ಗ್ರಾಮದ ಮುಖ್ಯ ಆಕರ್ಷಣೆ ವನಭದ್ರಕಾಳಿ ದೇವಾಲಯ. ಸುಮಾರು 16 ಎಕರೆ ದೇವರ ಕಾಡಿನಲ್ಲಿ ದೇವಿಯ ದೇಗುಲವಿದೆ. ಕೊಡಗಿನಲ್ಲಿರುವ ಸಾವಿರಾರು ದೇವರ ಕಾಡುಗಳಲ್ಲಿ ಇದೂ ಒಂದು. ಇಲ್ಲಿ ವಿವಿಧ ಜಾತಿಯ ಅಪರೂಪದ ಮರಗಳನ್ನು ಸಂರಕ್ಷಿಸಲಾಗಿದೆ. ವಿರಾಜಪೇಟೆ-ಮೈಸೂರು ಮಾರ್ಗದಲ್ಲಿ ದೇವಾಲಯವಿದ್ದು, ಈ ಮಾರ್ಗದಲ್ಲಿ ಪ್ರಯಾಣಿಸುವವರು ವಾಹನ ನಿಲ್ಲಿಸಿ ದೇವಿಗೆ ನಮಿಸಿಯೇ ತೆರಳುತ್ತಾರೆ. ಹಾಗಾಗಿ, ದೇವಿಗೆ ವಾಹನ ರಕ್ಷಕಿ ಎಂದು ಕರೆಯಲ್ಪಡುತ್ತದೆ.

ಇತಿಹಾಸ: ಕೊಂಗೇಪಂಡ ಕುಟುಂಬದ ಮಹಿಳೆಯೊಬ್ಬರಿಗೆ ಭತ್ತದ ಗದ್ದೆಯಲ್ಲಿ ಬಂಗಾರದ ಕೊಕ್ಕು ಹಾಗೂ ಕಾಲು ಹೊಂದಿರುವ ಪೋಳೆ (ಕೊಕ್ಕರೆ) ಕಾಲು ಕಾಣ ಸಿಗುತ್ತದೆ. ಆಗ ಆಕೆ ಕೊಕ್ಕರೆಯನ್ನು ತನ್ನ ಬಳಿಯಿದ್ದ ಕುಕ್ಕೆಯಲ್ಲಿ ಮುಚ್ಚಿ ಈ ಕೌತುಕವನ್ನು ಕುಟುಂಬದವರಿಗೆ ತಿಳಿಸುತ್ತಾಳೆ. ಸ್ಥಳಕ್ಕೆ ಬಂದ ಕುಟುಂಬದವರ ಪೈಕಿ ಒಬ್ಬರು ಆ ಕುಕ್ಕೆಯನ್ನು ತೆರೆದಾಗ ಅವರಿಗೆ ದೈವ ಆವಾಹನೆಯಾಗಿ, ಪ್ರಸ್ತುತ ದೇವಾಲಯವಿರುವ ಜಾಗದ ಬಳಿ ಬಂದು ನನಗೆ ಇಲ್ಲಿಯೇ ನೆಲೆ ನೀಡಿದಲ್ಲಿ ಗ್ರಾಮದ ಜನರನ್ನು ಕಾಪಾಡುತ್ತೇನೆ ಎಂದು ಹೇಳುತ್ತದೆ. ಈ ರೀತಿಯಾಗಿ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಯಿತು ಎಂಬ ಪ್ರತೀತಿಯಿದೆ.

ಭದ್ರಕಾಳಿ ದೇವಾಲಯದ ಉತ್ಸವದ ಹಿಂದಿನ ದಿನ ಸಮೀಪದಲ್ಲಿರುವ ಮಹಾದೇವರ ದೇವಾಲಯದ ಉತ್ಸವ ಮೂರ್ತಿಯನ್ನು ಕಳ್ಳರು ಅಪಹರಿಸುತ್ತಾರೆ. ಬಳಿಕ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿ ಹಿಡಿದಾಗ ವಿರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯ ಕೈಕೇರಿ ಸಮೀಪದ ಹಲಸಿನ ಮರವೊಂದರ ಬಳಿ ಮೂರ್ತಿ ಪತ್ತೆಯಾಗುತ್ತದೆ. ಇದರಿಂದ ಇಂದಿಗೂ ಉತ್ಸವದ ಹಿಂದಿನ ದಿನ ಹಲಸಿನ ಮರ ಬಳಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಬೆಳೆದು ಬಂದಿದೆ. ದೇವರ ಭಂಡಾರಕ್ಕಾಗಿ ಕೊಕ್ಕಂಡ ಕುಟುಂಬ, ದೇವತಕ್ಕರಾಗಿ ಕೊಂಗೇಪಂಡ ಕುಟುಂಬ ಹಾಗೂ ಮೂರನೇ ತಕ್ಕರ ಜಬಾಬ್ದಾರಿಯನ್ನು ಕೇಳಪಂಡ ಕುಟುಂಬ ನಿರ್ವಹಿಸುತ್ತಿದೆ. ಈ ಹಿಂದೆ ಈ ಜವಾಬ್ದಾರಿಯನ್ನು ಮುರುವಂಡ ಕುಟುಂಬ ನಿರ್ವಹಿಸುತ್ತಿತ್ತು.

ವನಭದ್ರಕಾಳಿ ಉತ್ಸವ ದಿನದಂದು ಬೆಳಗ್ಗೆ ಕೊಕ್ಕಂಡ ಕುಟುಂಬದ ಐನ್ಮನೆಯಿಂದ ದೇವಿಯ ಮೊಗ, ತೆರೆ ಹಾಗೂ ಕೇಳಪಂಡ ಕುಟುಂಬದ ಐನ್ಮನೆಯಿಂದ ಅಯ್ಯಪ್ಪ ಹೂ ತೆರೆ ಹೊರಡುತ್ತದೆ. ಅಲ್ಲಿಂದ ದೊಡ್ಡಮನೆ ಕುಟುಂಬದ ಹತ್ತಿರವಿರುವ ಆಲದ ಮರದ ಕಟ್ಟೆಯಲ್ಲಿ ಎರಡೂ ತೆರೆಗಳು ಜತೆಗೂಡುತ್ತವೆ. ನಂತರ, ಗದ್ದೆ ಹಾಗೂ ರಸ್ತೆಯ ಮೂಲಕ ಸಾಗಿ ದೇವಾಲಯವನ್ನು ತಲುಪುತ್ತದೆ. ದೇವಾಲಯದಲ್ಲಿ ಎತ್ತು ಪೋರಾಟ ಮುಂತಾದ ಧಾರ್ಮಿಕ ವಿದಿವಿಧಾನಗಳನ್ನು ನಡೆಸಲಾಗುತ್ತದೆ. ನಂತರ ಶುದ್ಧಿ ಕೆಲಸ ನಡೆಯುತ್ತದೆ. ಹರಕೆ ಒಪ್ಪಿಸುವ ಕಾರ್ಯ, ಮಹಾಪೂಜೆ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದು ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಉತ್ಸವ ನಂತರದ 3 ದಿನ ದೇವಾಲಯವನ್ನು ಮುಚ್ಚುತ್ತಾರೆ. ಬಳಿಕ ದೇವಾಲಯವನ್ನು ತೆರೆದು ಶುದ್ಧಿಗೊಳಿಸಿದ ಬಳಿಕವೇ ಪೂಜಾ ಕಾರ್ಯ ನೆರವೇರುತ್ತದೆ.

ಅಪರೂಪದ ಸಸ್ಯಸಂಕುಲ: ವಿಶೇಷವೆಂದರೆ, ಹೆದ್ದಾರಿಯ ಬದಿಯಲ್ಲಿರುವ ದೇವರ ಕಾಡಿನಲ್ಲಿ ದೇವಿ ನೆಲೆ ನಿಂತಿದ್ದಾಳೆ. ವಾಹನ ರಕ್ಷಕಿಯೆಂದೇ ಹೆಸರಾದ ದೇವಿಗೆ ದೂರದ ಊರುಗಳಿಗೆ ಪ್ರಯಾಣಿಸುವವರು ವಾಹನಗಳನ್ನು ನಿಲ್ಲಿಸಿ ಕೈಮುಗಿದೇ ಮುಂದೆ ಹೋಗುತ್ತಾರೆ. ಸುಮಾರು 16.38 ಎಕರೆ ವಿಸ್ತಿರ್ಣದ ಈ ದೇವರ ಕಾಡು ವೈವಿಧ್ಯಮಯ ಹಾಗೂ ಅಪರೂಪದ ಸಸ್ಯ ಸಂಕುಲದ ತಾಣವೂ ಆಗಿದೆ.

ಹಬ್ಬ ಮತ್ತು ಪೂಜೆ: ಇಲ್ಲಿ ಎರಡು ವರ್ಷಗಳಿಗೊಮ್ಮೆ ಸುತ್ತಲಿನ ದೇವಾಲಯ ವ್ಯಾಪ್ತಿಗೊಳಪಡುವ ಕುಟುಂಬಗಳ ನೇತೃತ್ವದಲ್ಲಿ ವನಭದ್ರಕಾಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಗ್ರಾಮಸ್ಥರು ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮದ ಜನರೂ ಹೂವು, ಹಣ್ಣು, ಕಾಯಿ ಅರ್ಪಿಸಿ ಮಳೆ, ಬೆಳೆ ಮತ್ತು ಜನ-ಜಾನುವಾರುಗಳನ್ನು ರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆಯಾದರೂ ಇಲ್ಲಿ ಪ್ರತಿ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ.

ಮಾರ್ಗ: ವಿರಾಜಪೇಟೆ- ಮೈಸೂರು ಹೆದ್ದಾರಿ ಬದಿಯಲ್ಲಿ ದೇವಾಲಯವಿದ್ದು, ಸ್ವಂತ ವಾಹನದಲ್ಲೂ ಇಲ್ಲಿಗೆ ಬರಬಹುದು. ದೇವಾಲಯದ ಬಳಿ ಖಾಸಗಿ ಬಸ್ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಅಭಿವೃದ್ಧಿ ಸಮಿತಿ: ವನಭದ್ರಕಾಳಿ ದೇವಾಲಯ ಅಭಿವೃದ್ಧಿ ಸಮಿತಿಯಿದ್ದು ಕೊಕ್ಕಂಡ ಡಿ.ಗಣಪತಿ ಅಧ್ಯಕ್ಷರಾಗಿದ್ದಾರೆ. ಕೊಂಗೇಪಂಡ ರವಿ ಕಾರ್ಯದರ್ಶಿ ಹಾಗೀ ಹಾತೂರು, ಕೊಳತ್ತೋಡು ಗ್ರಾಮದ ಪ್ರತಿ ಕುಟುಂಬದಿಂದ ಒಬ್ಬರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ.

ವನಭದ್ರಕಾಳಿ ದೇವಿ ನಂಬಿ ಬಂದವರನ್ನು ಕೈಬಿಡುವುದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಹಬ್ಬದ ದಿನ ದೂರದ ಊರುಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆಯುತ್ತಾರೆ. ನಿತ್ಯ ಸವಾರರೂ ದೇವಿಗೆ ಕೈಮುಗಿದು ಆಶೀರ್ವಾದ ಬೇಡುತ್ತಾರೆ. ಎರಡು ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯಿಂದ ದೇವಿಯ ಉತ್ಸವ ನಡೆಯುತ್ತದೆ.
ಕೊಕ್ಕಂಡ ಡಿ.ಗಣಪತಿ ಅಧ್ಯಕ್ಷ, ದೇವಸ್ಥಾನ ಅಭಿವೃದ್ಧಿ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net