ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪ್ರತಿ ತಿಂಗಳ ದ್ವಾದಶಿಯಂದು ಸಾಮಾನ್ಯವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ದ್ವಾದಶಿ (ಸೋಮವಾರ) ಯಂದು ಶ್ರೀಕೃಷ್ಣನು ವಾಮನ ಅವತಾರಿಯಾಗಿ ಕಂಗೊಳಿಸಿದನು.
ಏಕಾದಶಿಯಂದು ಪರ್ಯಾಯ ಶ್ರೀಗಳಿಗೆ ಉಪವಾಸವಿರುತ್ತದೆ. ಹೀಗಾಗಿ ದ್ವಾದಶಿಯಂದು ಬೆಳಗಿನ ಪೂಜೆಯ ಒತ್ತಡದಿಂದ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡುವುದಿಲ್ಲ.
ಮೊನ್ನೆ ಶನಿವಾರದ ನಿಮಿತ್ತ ಹಾಗೂ ಭಾನುವಾರದಂದು ಏಕಾದಶಿ ನಿಮಿತ್ತ ಎರಡು ದಿನ ಪರ್ಯಾಯ ಶ್ರೀಗಳು ಉಪವಾಸ ಮಾಡಿದ್ದರು. ಆದರೆ, ದ್ವಾದಶಿಯಂದು ವಾಮನ ಜಯಂತಿ ಇದ್ದುದರಿಂದ ಬೆಳಗಿನ ಪೂಜೆಯ ಒತ್ತಡದ ನಡುವೆಯೂ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಪ್ರತಿದಿನವೂ ವಿವಿಧ ಅಲಂಕಾರ ಮಾಡಿ ಆರಾಧಿಸುತ್ತಿದ್ದಾರೆ. ದ್ವಾದಶಿಯಂದೂ ಸಹ ಕಿರಿಯ ಶ್ರೀಗಳು, ಉಪವಾಸದ ಯಾವುದೇ ಆಯಾಸವಿಲ್ಲದೆ ಬಹು ಸುಂದರವಾಗಿ ಶ್ರೀಕೃಷ್ಣನಿಗೆ ವಾಮನ ಅವತಾರಿಯಾಗಿ ಅಲಂಕಾರ ಮಾಡಿದರು. ಪರ್ಯಾಯ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.