

ಹುಬ್ಬಳ್ಳಿ: ವಾಲ್ವ್ ಉತ್ಪಾದನೆಯಲ್ಲಿ ಜಾಗತಿಕ ಮನ್ನಣೆ ಗಳಿಸಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿ ಪ್ರದರ್ಶನ ಮೇಳ ಆಯೋಜಿಸುವ ಮೂಲಕ ಗಮನ ಸೆಳೆಯಿತು.
ಕರ್ನಾಟಕ ವಾಲ್ವ್ ತಯಾರಕರ ಅಸೋಸಿಯೇಶನ್ ವತಿಯಿಂದ ಇಲ್ಲಿಯ ಎಪಿಎಂಸಿ ಬಳಿಯ ಕೆಸಿಸಿಐನ ಮಲ್ಪಿ ಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಆಯೋಜಿಸಿದ್ದ 3 ದಿನಗಳ ವಾಲ್ವ್ ಎಕ್ಸ್-ಪ್ರದರ್ಶನ ಮೇಳಕ್ಕೆ ದೇಶ ವಿದೇಶದಿಂದ ಆಗಮಿಸಿದ ಅನೇಕ ಉದ್ಯಮಿಗಳು, ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಬಿಡಿಕೆ ವಾಲ್ವ್, ಮೈಕ್ರೋ ಫಿನಿಶ್, ಟುಎಲ್ ಇಂಜಿನಿಯರ್ಸ್, ಸುಪ್ರಿಯಾ ಪ್ರೊಟೊಟೆಕ್, ವಾಲ್ಟೆಕ್, ಮೈಕಾನ್, ಮುಂಬೈನ ಸ್ಟೀಲ್ ಸ್ಟ್ರಾಂಗ್ ಸೇರಿ ಅನೇಕ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಸೌದಿ ಅರೆಬಿಯಾ, ಕತಾರ್, ದುಬೈ, ಎಲ್ ಆ್ಯಂಟಡ್ ಟಿ ಹೈಡ್ರೋಕಾರ್ಬನ್, ಜೆಎಸ್ಡಬ್ಲೂ, ಎನ್ಪಿಸಿಐಎಲ್ ಕೈಗಾ ಮುಂತಾದ ಕಡೆಗಳಿಂದ ಬಂದ ಜನರು ಮೇಳ ವೀಕ್ಷಣೆ ಮಾಡಿದರು.
ವಾಲ್ವ್ ಮೇಳದಿಂದ ಹುಬ್ಬಳ್ಳಿಯ ಹಿರಿಮೆ ಜಗತ್ತಿಗೆ ಪಸರಿಸಿದೆ. ಉತ್ಪಾದಕ ಕಂಪನಿಗಳಿಗೆ ಇನ್ನಷ್ಟು ಕೌಶಲ ಬೆಳೆಸಿಕೊಳ್ಳಲು ಅನುಕೂಲವಾಗಿದೆ. ಸುಮಾರು 60 ಕಂಪನಿಗಳು ಪ್ರದರ್ಶನ ನೀಡಿವೆ ಎಂದು ಮೇಳದಲ್ಲಿ ಪಾಲ್ಗೊಂಡಿದ್ದ ನಿಲೇಶ ಹೊನ್ನಳ್ಳಿ ತಿಳಿಸಿದ್ದಾರೆ.
ಮೇಳದ ಕೊನೆಯ ದಿನ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಹುಬ್ಬಳ್ಳಿಯು ವಾಲ್ವ್ ಉತ್ಪಾದನೆಯ ಹಬ್ ಆಗಿ ಬೆಳವಣಿಗೆಯಾಗಿದೆ. ಇಲ್ಲಿ ವಾಲ್ವೆಕ್ಸ್ ಮೇಳ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಪ್ರಮುಖರಾದ ಎಸ್.ಕೆ. ಆವಟಿ, ತಿಲಕ್ ವಿಕಂಶಿ, ನಾಗರಾಜ ದುಟೆ, ಹೇಮಂತ ಎಂ, ರಮೇಶ ಶೆಟ್ಟಿ ಇತರರು ಪಾಲ್ಗೊಂಡಿದ್ದರು.