ಎಲ್ಲ ಕಾಲಕ್ಕೂ ಸಲ್ಲುವ ಮೌಲ್ಯಗಳು ಶರಣ ಸಾಹಿತ್ಯದಲ್ಲಿವೆ

27 NRD-1- UMESHGOUDA PATIL
Published on

ನರಗುಂದ: ಶರಣ ಸಾಹಿತ್ಯದಲ್ಲಿ ಎಲ್ಲ ಕಾಲ, ವರ್ಗಕ್ಕೂ ಪ್ರಸ್ತುತವಾಗುವ ಪ್ರತಿಪಾದನೆ ಮಾಡಿದ ಜೀವನದ ಮೌಲ್ಯಗಳಿವೆ. ಇದು ಶರಣರು ಜೀವನಕ್ಕೆ ನೀಡಿರುವ ಸಂವಿಧಾನದ ನೀತಿ ಸಂಹಿತೆಯಾಗಿದೆ. ಶರಣ ಚಳವಳಿಯು ಗಾಂಧಿ ಮತ್ತು ಅಂಬೇಡ್ಕರ್ ಅವರ ಸಮೀಕರಣದಂತೆ ಕಾಣುತ್ತದೆ. ಇವರಿಬ್ಬರೂ ಕಟ್ಟಲು ಬಯಸಿದ ಆರೋಗ್ಯಪೂರ್ಣ, ಮಾನವೀಯ, ಸ್ವಾವಲಂಬಿ ಸಮುದಾಯದ ಸಮಗ್ರ ಕಲ್ಪನೆ 12ನೇ ಶತಮಾನದಲ್ಲಿಯೇ ಕಂಡು ಬಂದಿದೆ ಎಂದು ಉಪನ್ಯಾಸಕ ಶಂಭು ಹೆಗಡಾಳ ಬಣ್ಣಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ತಿನ ನರಗುಂದ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯ ರಚನೆಯಾದ ಹಲವು ಶತಮಾನಗಳ ನಂತರವೂ ಶರಣರ ನಿಜ ಜೀವನದ ಅನುಭವ ಆಧರಿಸಿ ಬರೆಯಲಾದ ವಚನಗಳು ವ್ಯಕ್ತಿಯ ಅರ್ಥಪೂರ್ಣ ಜೀವನಕ್ಕೆ ಮಾರ್ಗ ದರ್ಶಕದ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಶರಣ ಚಳವಳಿಯ ಮೂಲ ತತ್ವಗಳಾದ ಕಾಯಕ ಮತ್ತು ದಾಸೋಹದಿಂದ ಜನರು ವಿಮುಖರಾಗುತ್ತಿರುವುದು ದುರ್ದೈವಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿ ಗುರು ಮತ್ತೂರ ಮಾತನಾಡಿ, ಶರಣರು ರಚಿಸಿದ ವಚನಗಳು ಜೀವನದ ಅನುಭವಗಳ ಅಭಿವ್ಯಕ್ತಿಗಳಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಶರಣರ ವಚನಗಳು ಸಮಾನತೆಯ ತತ್ವ, ಸಿದ್ಧಾಂತದ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಶರಣ ಸಾಹಿತ್ಯವನ್ನು ವಿಶ್ವನಾಯಕರಿಗೆ ಪರಿಚಯಿಸಿ ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸಬೇಕಾಗಿದೆ. ವಚನಗಳು ಕನ್ನಡದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಅಷ್ಟೇ ಅಲ್ಲ ಅವು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪೂರ್ವ ಕೊಡುಗೆಗಳಾಗಿವೆ ಎಂದು ಹೇಳಿದರು.

ಉಮೇಶಗೌಡ ಪಾಟೀಲ, ಗದಗ ಜಿಲ್ಲಾ ಶಶಾಪ ಅಧ್ಯಕ್ಷ ಕೆ.ಎ.ಬಳಿಗೇರ ಮಾತನಾಡಿದರು. ಅಪ್ಪಣ್ಣಗೌಡ ನಾಯ್ಕರ, ಸಿ.ಎಸ್. ಸಾಲೂಟಗಿಮಠ, ಬಿ.ಎಂ. ಜಾಬಣ್ಣವರ, ಪೋ›.ಪಿ.ಎಸ್. ಅಣ್ಣಿಗೇರಿ, ಚಂದ್ರು ದಂಡಿನ, ಗ್ರಾಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ, ಲೀಲಕ್ಕ ಹಸಬಿ, ಸುಕನ್ಯಾ ಸಾಲಿ, ಎಸ್.ಜಿ. ಮಣ್ಣೂರಮಠ ಸೇರಿ ನೂತನ ಪದಾಧಿಕಾರಿಗಳು ಇದ್ದರು. ಉಪನ್ಯಾಸಕ ಎಸ್.ಎಸ್. .ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net