

ಹುಬ್ಬಳ್ಳಿ: ಆಸ್ತಿಗಳ ಸಮರ್ಪಕವಾದ ಮೌಲ್ಯ ಗುರುತಿಸಿ ಅವುಗಳಿಗೆ ಹೆಚ್ಚಿನ ಹಣಕಾಸಿನ ಸೌಲಭ್ಯ ಸಿಗುವಂತೆ ಮಾಡಿ ವ್ಯಾಪಾರ ವಹಿವಾಟಿಗೆ ತಮ್ಮದೇ ಆದ ಕೊಡುಗೆ ನೀಡುವ ವ್ಯಾಲ್ಯೂವರ್ಸ್ (ಮೌಲ್ಯಮಾಪಕರು) ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ವಲಯ ಉಪ ಪ್ರಧಾನ ವ್ಯವಸ್ಥಾಪಕ ವಿ. ಶ್ರೀಹರಿ ಅಭಿಪ್ರಾಯಪಟ್ಟರು.
ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಅಸೋಸಿಯೇಶನ್ ಸಭಾಂಗಣದಲ್ಲಿ ಭಾನುವಾರ ಇನ್ ಸ್ಟಿಟ್ಯೂಟ್ ಆಫ್ ವ್ಯಾಲ್ಯೂವರ್ಸ್ (ಐಒವಿ) ಹುಬ್ಬಳ್ಳಿ ಶಾಖೆ ವತಿಯಿಂದ ಏರ್ಪಡಿಸಿದ್ದ ಮೌಲ್ಯಮಾಪಕರ ದಿನಾಚರಣೆ ಹಾಗೂ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ತಿಗಳ ಮೌಲ್ಯಮಾಪನ ಮಾಡಿ ಹೇಳುವ ವ್ಯಾಲ್ಯೂವರ್ಸ್ ಬ್ಯಾಂಕ್ ವ್ಯವಹಾರದಲ್ಲಿ ಪಾಲುದಾರರಿದ್ದಂತೆ. ನಿಮ್ಮ ಸಹಕಾರ, ಬೆಂಬಲ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಬ್ಯಾಂಕ್ ಗಳು ಸಾಲ ಸೌಲಭ್ಯಗಳನ್ನು ನೀಡುವುದು ಮೌಲ್ಯಮಾಪಕರ ನಿರ್ಧಾರಗಳ ಆಧಾರದಲ್ಲಿ ಎಂದರು.
ಸಣ್ಣ ಉದ್ಯಮ, ಗೃಹ ಸಾಲ ಯಾವುದೇ ಇರಲಿ ಗ್ರಾಹಕರು ವ್ಯಾಲ್ಯೂವರ್ಸ್ ಬಳಿ ಹೋಗುತ್ತಾರೆ. ಆಗ ಅವರಿಗೆ ಸರಿಯಾದ ಮಾರ್ಗದರ್ಶನ ತುಂಬಾ ಅಗತ್ಯವಾಗಿರುತ್ತದೆ. ಕಟ್ಟಡ ಉತ್ತಮವಾಗಿರುತ್ತದೆ. ಆದರೆ, ಸಂಪರ್ಕ ರಸ್ತೆಯಂತಹ ಕೆಲ ಅಗತ್ಯಗಳು ಇರುವುದಿಲ್ಲ. ಆಗ ಅದರ ಮೌಲ್ಯ ಗುರುತಿಸುವಾಗ ನಿಮ್ಮ ಜಾಣ್ಮೆ ಪ್ರದಶಿರ್ಸಬೇಕು ಎಂದು ಸಲಹೆ ನೀಡಿದರು.
ಬದಲಾದ ತಂತ್ರಜ್ಞಾನವು ಮೌಲ್ಯಮಾಪಕರಿಗೆ ಬಹಳಷ್ಟು ನೆರವಾಗಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದ ಹಲವು ಯೋಜನೆಗಳಿಂದಾಗಿ ರೈತರು ಸೇರಿ ಎಲ್ಲ ಕ್ಷೇತ್ರಗಳಿಗೆ ಅನುಕೂಲವಾಗಿವೆ. ಹಾಗಾಗಿ ಹೆಚ್ಚು ಸಾಲ ಸೌಲಭ್ಯಕ್ಕಾಗಿ ಜನರು ಬ್ಯಾಂಕ್ ಗಳಿಗೆ ಬರುತ್ತಾರೆ. ಇದರಿಂದ ಮೌಲ್ಯಮಾಪಕರ ಅವಶ್ಯಕತೆ ಬಹಳಷ್ಟಿದೆ ಎಂದರು.
ಐಒವಿ ನೈಋತ್ಯ ವಲಯ ಕೋಆರ್ಡಿನೇಟರ್ ಹಾಗೂ ಕೌನ್ಸಿಲ್ ಮೇಂಬರ್ ಜಿ.ಎಸ್. ಅಂಗಡಿ ಪ್ರಾಸ್ತಾವಿಕ ಮಾತನಾಡಿ, ದೇಶವು ಆರ್ಥಿಕ ಸುಸ್ಥಿರತೆ ಹಾಗೂ ಧನಾತ್ಮಕ ಅಭಿವೃದ್ಧಿಯಲ್ಲಿ ಮೌಲ್ಯಮಾಪಕರ ಪಾತ್ರ ಬಹಳ ದೊಡ್ಡದಿದೆ. ಹೂಡಿಕೆದಾರರು, ಖಾಸಗಿ ಕಂಪನಿಗಳ ವಹಿವಾಟು ಹೆಚ್ಚಳ ಮಾಡುವಲ್ಲಿ ಮಹತ್ವ ವಹಿಸುತ್ತಾರೆ. ಈ ಮೂಲಕ ವಿಕಸಿತ ಭಾರತ ಕನಸು ನನಸು ಮಾಡಲು ಹಾಗೂ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಾರೆ ಎಂದರು.
ಇಂಜಿನಿಯರ್ ಅಲ್ಲದವರು ಕೂಡ ಇತ್ತೀಚೆಗೆ ಈ ವೃತ್ತಿಗೆ ಬರುತ್ತಿದ್ದು, ಈ ದಿಸೆಯಲ್ಲಿ ಮೌಲ್ಯಮಾಪಕರು ತಮ್ಮ ವೃತ್ತಿಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಇದರ ಮಹತ್ವ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಗೋಷ್ಠಿಗಳು ನಡೆದವು.
ಗೋಕುಲ ರೋಡ್ ಬ್ಯಾಂಕ್ ಆಫ್ ಬರೋಡಾ ಮುಖ್ಯ ವ್ಯವಸ್ಥಾಪಕ ಜಿ. ರಾವೇಂದ್ರ ಮಾತನಾಡಿ, ಕಾನೂನು ಸಲಹೆಗಾರರು ಹಾಗೂ ಆಸ್ತಿ ಮೌಲ್ಯಮಾಪಕರು ಬ್ಯಾಂಕಿನ ಎರಡು ಆಧಾರ ಸ್ತಂಭಗಳಿದ್ದಂತೆ. ನೀವು ಮೌಲ್ಯಮಾಪನ ಮಾಡಿದ ಆಧಾರದಲ್ಲಿ ಬ್ಯಾಂಕ್ ಗಳು ಹಣಕಾಸಿನ ಅವಕಾಶ ನೀಡುತ್ತವೆ. ಹಾಗಾಗಿ ಸಮಂಜಸ ಆಸ್ತಿ ಮೌಲ್ಯಮಾಪನ ಆಗಬೇಕು. ಪಾರದರ್ಶಕ ಹಾಗೂ ಸ್ಪಷ್ಟವಾಗಿರಬೇಕು ಎಂದು ಸಲಹೆ ನೀಡಿದರು.
ಹಿರಿಯರಾದ ಎಚ್.ಕೆ. ಶರ್ಮಾ ಅವರು ಮೌಲ್ಯಮಾಪನ ವೃತ್ತಿಯ ಮಹತ್ವ ಕುರಿತು ವಿವರಿಸಿದರು.
ಎಚ್.ಎಂ. ಕುಮಾರ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕ ಪರಿಶೋಧಕ ನಟರಾಜ ಮೂರಶಿಳ್ಳಿ ಅತಿಥಿಗಳಾಗಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಎಂ. ಜಾಲವಾದಿ, ಎಸ್.ಎಸ್. ಹಿರೇಮಠ, ಖಜಾಂಚಿ ಎಂ.ಎ್. ಜುಂಜಣ್ಣವರ, ಗೌರವ ಕಾರ್ಯದರ್ಶಿ ರಾಜು ಕೆ. ಗೌಡ, ಜಿ.ಎಲ್. ಪಾಟೀಲ, ಅಶೋಕ ಜೋಶಿ, ಸಂತೋಷ ರೋಖಡೆ, ಎಂ.ಆರ್. ಛಬ್ಬಿ, ಪ್ರಮೋದ, ದೀಪಕ ದೇಸಾಯಿ, ಜಯಶ್ರೀ ಮುಂಜಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮೌಲ್ಯಮಾಪಕರು ಭಾಗವಹಿಸಿದ್ದರು.
ಶಿವಪ್ರಸಾದ ಲಖಮನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.