ಸಾಧನೆಯೊಂದಿಗೆ ಸಂಸ್ಕಾರ ಮಿಳಿತವಾಗಿದ್ದರೆ ಮೌಲ್ಯ ಹೆಚ್ಚು

10kmt1_Halakki
Published on

ಕುಮಟಾ: ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು ಮತ್ತು ಅದನ್ನು ಕೊಡಿಸುವುದು ಪಾಲಕರ ಕರ್ತವ್ಯ. ಸಾಧನೆಯೊಂದಿಗೆ ಸಂಸ್ಕಾರವೂ ಮಿಳಿತವಾಗಿದ್ದರೆ ಮೌಲ್ಯ ಹೆಚ್ಚುತ್ತದೆ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.

ದಿವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘದಿಂದ ಹಮ್ಮಿಕೊಂಡಿದ್ದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಯಾರೂ ದಡ್ಡರಲ್ಲ, ಪ್ರತಿಯೊಂದು ಮಗುವಿನಲ್ಲೂ ವಿಶೇಷತೆ ಇರುತ್ತದೆ. ಅದನ್ನು ಬೆಳಕಿಗೆ ತರುವ ಪ್ರಯತ್ನ ಶಿಕ್ಷಕರು, ಸಮಾಜ, ಪಾಲಕರು ಮಾಡಬೇಕು. ಹಾಲಕ್ಕಿ ಸಮಾಜದ ಪ್ರತಿಭೆಗಳನ್ನು ಸಂಘವು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮತ್ತು ಸಾಧಕರನ್ನು ಗೌರವಿಸುತ್ತಿರುವುದು ಅರ್ಥಪೂರ್ಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಹಾಲಕ್ಕಿ ಸಮಾಜದ ಬಗ್ಗೆ ನನಗೆ ಅಭಿಮಾನವಿದೆ. ಹಾಲಕ್ಕಿಗಳು ನಿಗರ್ವಿಗಳು, ಸ್ವಾಭಿಮಾನಿಗಳು. ಆದರೆ, ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಹಾಲಕ್ಕಿಗಳು ಸಮಾಜದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ ಎಂದರು.

ಸೂರಜ ನಾಯ್ಕ ಸೋನಿ ಮಾತನಾಡಿ, ಹಾಲಕ್ಕಿ ಸಮುದಾಯ ಸಾಂಸ್ಕೃಕವಾಗಿ, ಸಾಂಪ್ರದಾಯಿಕವಾಗಿ ಅತ್ಯಂತ ಶ್ರೀಮಂತ. ಇವರ ನಾಟಿವೈದ್ಯ ಪದ್ಧತಿ, ಸುಗ್ಗಿ ಕುಣಿತ ನಾಡಿಗೆ ಮಾನ್ಯವಾಗಿದೆ. ಇದು ಸಂಶೋಧನೆಗೆ ಅರ್ಹ ಸಂಗತಿ. ಶೈಕ್ಷಣಿಕವಾಗಿಯೂ ಹಾಲಕ್ಕಿಗಳು ಮುನ್ನಡೆಯುತ್ತಿರುವುದು ಸಂತಸದಾಯಕ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಇಡೀ ಸಮುದಾಯ ಪ್ರಗತಿ ಸಾಧಿಸಬಹುದು ಎಂದರು.

ಬಿಇಒ ಆರ್.ಎಲ್. ಭಟ್, ಡಿಎಫ್​ಒ ಯೋಗೇಶ, ಗ್ರೇಡ್ -2 ತಹಸೀಲ್ದಾರ್ ಸತೀಶ ಗೌಡ, ಕರಾವಳಿ ಕಾವಲು ಪಡೆಯ ಪಿಎಸ್​ಐ ಸಂಪತ್​ಕುಮಾರ ಇ.ಸಿ. ಅಧ್ಯಕ್ಷತೆ ವಹಿಸಿದ್ದ ಹಾಲಕ್ಕಿ ಸಂಘದ ಅಧ್ಯಕ್ಷ ಗೋವಿಂದ ಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾ ಗೌಡ, ನಾಟಿ ವೈದ್ಯ ಸುಗ್ಗಿ ಕುಪ್ಪು ಗೌಡ, ಜಾನಪದ ಕಲಾವಿದೆ ಸೋಮ ಗಣಪು ಗೌಡ ಅವರನ್ನು ಸನ್ಮಾನಿಸಲಾಯಿತು. 72 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಅಶೋಕ ಗೌಡ, ಹೊನ್ನಾವರ ಪಿಯು ಕಾಲೇಜು ಪ್ರಾಚಾರ್ಯ ರವಿ ಗೌಡ, ಹಾಲಕ್ಕಿ

ಶ್ರೀಧರ ಗೌಡ ಸ್ವಾಗತಿಸಿದರು. ನೀಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಗೌಡ, ಈರು ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net