

ವಿಜಯವಾಣಿ ಸುದ್ದಿಜಾಲ ಧಾರವಾಡ
ಶರಣ ಸಾಹಿತ್ಯ ಸಾಗರವಿದ್ದಂತೆ. ಅದರಲ್ಲಿ ಭಕ್ತಿ, ಕಾಯಕ, ದಾಂಪತ್ಯ, ಸ್ತ್ರೀ ಸಮಾನತೆ, ದಾಸೋಹ, ಸ್ವಾತಂತ್ರೃ, ಅಭಿವ್ಯಕ್ತಿ ಸೇರಿ ಅನೇಕ ಜೀವನ ಮೌಲ್ಯಗಳನ್ನು ಕಾಣುತ್ತೇವೆ ಎಂದು ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಶರಣಮ್ಮ ಗೋರೆಬಾಳ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗುರಪ್ಪನವರು ಗೌರಮ್ಮ ಬೆಲ್ಲದ ದತ್ತಿ ನಿಮಿತ್ತ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು ಕುರಿತು ಅವರು ಮಾತನಾಡಿದರು.
ಎಲ್ಲ ಸಾಹಿತ್ಯಕಾರರು ಮೌಲ್ಯಗಳನ್ನು ಇಟ್ಟುಕೊಂಡು ಸಾಹಿತ್ಯ ರಚಿಸುವರು. ಶರಣ ಸಾಹಿತ್ಯಕ್ಕೆ ಬಂದಾಗ ಸಾಹಿತ್ಯಕ್ಕಿಂತ ಬದುಕು ದೊಡ್ಡದು, ಬದುಕಿಗಿಂತ ಮೌಲ್ಯ ದೊಡ್ಡದು ಎನ್ನುವುದನ್ನು ಕಾಣುತ್ತೇವೆ. ವಚನ ಸಾಹಿತ್ಯ ಸಾಂಸ್ಕೃತಿಕವಾಗಿ ಬಹುದೊಡ್ಡ ಸಂಪತ್ತು. ಅದು ಮೌಲ್ಯಗಳ ಕಣಜ. ವಚನ ಸಾಹಿತ್ಯ ಎಂದರೆ ಪ್ರೀತಿ, ವಿಶ್ವಾಸ, ದಯೆ, ಮಮತೆ, ನಡೆ, ನುಡಿ ಇಡೀ ಮನುಷ್ಯನ ಬದುಕಿನ ಸಾರಾಂಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಜೀವನದ ಅನುಭವದ ಮೇಲೆ ಶಿವಶರಣರು ವಚನ ಸಾಹಿತ್ಯದ ಮೂಲಕ ಮೌಲ್ಯಗಳನ್ನು ತಿಳಿಸಿದ್ದಾರೆ ಎಂದರು.
ದತ್ತಿದಾನಿಗಳ ಪರವಾಗಿ ಅರವಿಂದ ಬೆಲ್ಲದ ಮಾತನಾಡಿದರು. ಪ್ರಶಾಂತ ಬೆಲ್ಲದ, ಡಾ. ರತ್ನಾ ಐರಸಂಗ, ನೀಲಕ್ಕ ಬೆಲ್ಲದ, ಶಾರದಾದೇವಿ ಬೆಲ್ಲದ, ಗೌರಿ ಪಾಟೀಲ, ಸ್ಮತಿ ಬೆಲ್ಲದ, ಮಹೇಶ ಬೆಲ್ಲದ, ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಎಂ.ಎಂ. ಚಿಕ್ಕಮಠ, ನಿಂಗಣ್ಣ ಕುಂಟಿ, ಶಶಿಧರ ಉಜ್ಜಿನಿ, ಎಂ.ಕೆ. ಕುರಕುರಿ, ಯು.ಎಸ್. ಕುನ್ನಿಭಾವಿ, ಶಿವಣ್ಣ ಅಂಗಡಿ, ಮಾಯಕೊಂಡ, ಪುಠಾಣಿ ಕುಟುಂಬ, ಬೆಲ್ಲದ ಕುಟುಂಬಸ್ಥರು, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು. ಬಸವಪ್ರಭು ಹೊಸಕೇರಿ ವಂದಿಸಿದರು.