ವಾಲ್ಮೀಕಿ ಜೀವನ ಸಂದೇಶ ಇಂದಿಗೂ ಪ್ರಸ್ತುತ; ಸಂಗಮೇಶ ಬಬಲೇಶ್ವರ

VALMIKI JAYANTI IN RANGAMANDIRA
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರ ಜೀವನ ಸಂದೇಶಗಳ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ತಿಳಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರು, ಪಾಲಕರು ಮುತುವರ್ಜಿವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಭಾರತ ದೇಶವಷ್ಟೇ ಅಲ್ಲದೇ ನೇಪಾಳ, ಬಾಂಗ್ಲಾ ದೇಶದಲ್ಲಿಯೂ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಭಾರತದ ಮಣ್ಣಿನಲ್ಲಿ ರಚನೆಗೊಂಡ ಮೊದಲ ಮಹಾಕಾವ್ಯ ರಾಮಾಯಣ ಎಂದು ಹೇಳಿದರು.

ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಲ್ಲಿ ರಾಮಾಯಣದ ಕಥೆಗಳನ್ನು ಕೇಳಿರುತ್ತೇವೆ. ಗುರು ಹಿರಿಯರ ಮಾತುಗಳು, ಕಥೆಗಳು ಮಕ್ಕಳಿಗೆ ಪ್ರೇರಣಾದಾಯಕವಾಗಬೇಕು. ಜೀವನದಲ್ಲಿ ಸಮಸ್ಯೆಗಳು ಬಂದರೆ ಅದನ್ನು ಎದುರಿಸುವ ಛಲ ಮಕ್ಕಳಲ್ಲಿ ಬೆಳೆಸಬೇಕು. ಸಮಾಜದ ಏಳ್ಗೆಗಾಗಿ ಶ್ರಮಿಸಿದ ಮಹನೀಯರ ಬದುಕು ಹಾಗೂ ಅದರ್ಶಗಳಿಗೆ ಎಲ್ಲ ಸಮಾಜದಿಂದ ಗೌರವ ಸಲ್ಲಿಸಬೇಕು.

ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡುತ್ತಾ, ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ, ರಾಮಾಯಣ ಹಾಗೂ ಶ್ಲೋಕಗಳ ಬಗ್ಗೆ ವಿವರವಾಗಿ ಹೇಳಿದರು.

ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ್, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಉಪ ನಿರ್ದೇಶಕ ಡಾ. ಅಶೋಕ ಎಸ್. ಘೋಣಸಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ. ಹೊಸಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಉಮಾದೇವಿ ಸೊನ್ನದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎ.ಎಸ್. ದೀಪಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು.

ರಂಗನಾಥ ಬತ್ತಾಸೆ ಅವರ ತಂಡದಿಂದ ಮಹರ್ಷಿ ವಾಲ್ಮೀಕಿಯವರ ಜೀವನ ಕುರಿತಾದ ನೃತ್ಯರೂಪಕ ಪ್ರಸ್ತುತಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net