

ಕೊಪ್ಪಳ:ವಾಲ್ಮೀಕಿ ನಾಯಕ ಸಮುದಾಯ ಒಳಿತಿಗೆ ಎಲ್ಲರೂ ಶ್ರಮಿಸೋಣ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ರಾಜನಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಸಮುದಾಯದವರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್ಟಿ ಮೀಸಲು ಶೇ.7ಕ್ಕೆ ಏರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂವಿಧಾನದ ಶೆಡ್ಯುಲ್ 9ಗೆ ತಿದ್ದುಪಡಿ ತರಬೇಕಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾನೂನು ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು.
ಸಮುದಾಯದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಮಠದ ಬಗ್ಗೆ ಇರುವ ಅಪಸ್ವರಗಳ ಬಗ್ಗೆ ರಾಜ್ಯಮಟ್ಟದ ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಜಿಲ್ಲಾವಾರು ಸಭೆ ನಡೆಸಿ ಗೊಂದಲ ತಿಳಿಗೊಳಿಸಲಾಗುವುದು ಎಂದರು.
ಕೆಲವರು ದುರುದ್ದೇಶದಿಂದ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಸ್ವಲ್ಪ ಸಮಾಧಾನದಿಂದ ಇರಬೇಕು. ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಹೆಚ್ಚಿದೆ. ಅದನ್ನು ತಡೆಯಲು ನಿರಂತರ ಹೋರಾಟ ಅಗತ್ಯ.
ಸದ್ಯ ಧರ್ಮದರ್ಶಿಗಳ ಅವಧಿ ಆಜೀವ ಎಂದಿದೆ. ಪ್ರತಿ ತಾಲೂಕಿಗೊಬ್ಬ ಮಠದ ಪ್ರತಿನಿಧಿ ನೇಮಿಸಬೇಕಿದ್ದು, ಆಯ್ಕೆ ಮಾಡಿ ಕಳಿಸಿ. ಅವರ ಅವಧಿ ಎಷ್ಟು ವರ್ಷ ಇರಬೇಕೆಂದು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಸಮದಾಯದ ಗಣ್ಯರು ಅನೇಕ ವಿಷಯಗಳ ಕುರಿತು ಚರ್ಚಿಸಿದರು. ಶ್ರೀಗಳು ಮಠದ ಬಗ್ಗೆ ಗೊಂದಲಗಳಿದ್ದಲ್ಲಿ ದಾಖಲೆ ಪರಿಶೀಲಿಸುವಂತೆ ಸಲಹೆ ನೀಡಿದರು.
ಎಸ್ಟಿ ಹಾಸ್ಟೆಲ್ ವ್ಯವಸ್ಥೆ ಸರಿಪಡಿಸುವಿಕೆ, ಹೊಸ ಹಾಸ್ಟೆಲ್ ಪ್ರಾರಂಭಿಸುವ ಕುರಿತು ಸಮುದಾಯದ ಸಚಿವರಿಗೆ ಮನವರಿಕೆ ಮಾಡಲಾಗಿದೆ ಶೀಘ್ರ ಪರಿಹಾರ ಸಿಗುವ ಭರವಸೆ ಇದೆ ಎಂದರು.
ಗುರುಪೀಠದ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ್, ವಿಪ ಸದಸ್ಯೆ ಹೇಮಲತಾ ನಾಯಕ್, ಪ್ರಮುಖರಾದ ಹನುಮೇಶ ನಾಯಕ, ಶರಣಪ್ಪ ನಾಯಕ, ಸುರೇಶ್ ಡೊಣ್ಣಿ,
ಕೆ.ಎನ್.ಪಾಟೀಲ್, ಶಿವರಡ್ಡಿ , ವೀರಭದ್ರಪ್ಪ ನಾಯಕ್, ಬಸವರಾಜ ನಾಯಕ, ಗೀತಾ ಮುತ್ತಾಳ, ಮಂಜುನಾಥ ಗೊಂಡಬಾಳ ಇತರರಿದ್ದರು.