

ತಾಲೂಕು ನಾಯಕ ಸಮಾಜದ ಅಧ್ಯಕ್ಷ ಸುರೇಗೌಡ ಮಾತನಾಡಿ, "ಮಾಜಿ ಸಂಸದ ರಮೇಶ್ ಕತ್ತಿ ಅವರು ವಾಲ್ಮೀಕಿ ನಾಯಕ ಸಮಾಜವನ್ನು ನಿಂದಿಸಿರುವುದನ್ನು ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ" ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಹಿತ್ ಕುಮಾರ್ ಮಾತನಾಡಿ, "ರಮೇಶ್ ಕತ್ತಿ ಸಂಸದರಾಗಿದ್ದಾಗ ಮತ್ತು ಅವರ ಸಹೋದರ ಉಮೇಶ್ ಕತ್ತಿ ಶಾಸಕರಾದಾಗ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಅವರ ಗೆಲುವಿಗೆ ಕಾರಣರಾಗಿದ್ದರು. ರಮೇಶ್ ಕತ್ತಿ ಅವರು ಈ ಉಪಕಾರವನ್ನು ಮರೆತು ನಾಯಕ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ
ಮದಕರಿ ನಾಯಕ ಯುವ ಸೇನಾ ಸಮಿತಿಯ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ ಮಾತನಾಡಿ, "ರಮೇಶ್ ಕತ್ತಿಯನ್ನು ಶೀಘ್ರವಾಗಿ ಬಂಧಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಹೊರಕೇರಪ್ಪ, ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಮಂಜುನಾಥ್ ಸಂಗನಗುಂಡಿ, ಕರವೇ ಅಧ್ಯಕ್ಷ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ರಾಜಣ್ಣ ರಾಮಗಿರಿ, ಸಮಾಜದ ಮುಖಂಡರಾದ ಹೊಳಲ್ಕೆರೆ ಕೃಷ್ಣಮೂರ್ತಿ, ಅಶೋಕಣ್ಣ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಧು ಪಾಲೇಗೌಡ, ಗ್ರಾಪಂ ಸದಸ್ಯ ಯತೀಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.