ವಾಲ್ಮೀಕಿ ತತ್ವ, ಸಿದ್ಧಾಂತಗಳು ಸದಾ ಜೀವಂತ

17 ckm 4
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಚ್.ಡಿ.ತಮ್ಮಯ್ಯ, ಸುಜಾತಾ ಶಿವಕುಮಾರ್, ಮೀನಾ ನಾಗರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಮಾಯಣ ಮಹಾಕಾವ್ಯದ ಕರ್ತೃ ಶ್ರೀಮಹರ್ಷಿ ವಾಲ್ಮೀಕಿ ಅವರ ತತ್ವ ಸಿದ್ಧಾಂತಗಳು ಸದಾ ಜೀವಂತ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವು ಮಹತ್ವ ಪೂರ್ಣ ಗ್ರಂಥವಾಗಿದೆ. ಯುಗ ಪುರುಷ ಶ್ರೀರಾಮನ ಆದರ್ಶ, ಜೀವನ ಶೈಲಿ, ವ್ಯಕ್ತಿತ್ವ ಹಾಗೂ ಅವರ ದೈವ ಸ್ವರೂಪವನ್ನು ಕಾವ್ಯದ ಮೂಲಕ ಅದ್ಭುತವಾಗಿ ವರ್ಣಿಸಲಾಗಿದೆ. ಇಂದಿಗೂ ರಾಮ ರಾಜ್ಯದ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳುತ್ತಾರೆ. ಇಂತಹ ಮಹತ್ವ ಪೂರ್ಣ ಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಬದುಕು ಪ್ರೇರಣೀಯವಾದುದು ಎಂದರು.
ಮಹರ್ಷಿ ವಾಲ್ಮೀಕಿ ಕೇವಲ ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಶ್ರೀರಾಮನ ವ್ಯಕ್ತಿತ್ವ ಸಾರುವ ಅವರ ರಾಮಾಯಣ ಮಾಹಾ ಕಾವ್ಯವು ವಿಶ್ವಾದ್ಯಂತ ಮನ್ನಣೆ ಪಡೆದಿದೆ. ಇದರ ಸಾರವನ್ನು ತಿಳಿಯುವ ಪ್ರತಿಯೊಬ್ಬ ವ್ಯಕ್ತಿಯ ಬದುಕು ಬದಲಾಯಿಸುವ ಗ್ರಂಥ ಇದಾಗಿದೆ. ಸಮಾಜದಲ್ಲಿ ಸತ್ಯ, ನಿಷ್ಠೆ, ಸಮಾನತೆಯ ಸಹಬಾಳ್ವೆ, ಪರೋಪಕಾರಿಯಾಗಿ ಹಾಗೂ ಧರ್ಮ ಶ್ರದ್ಧೆಯಿಂದ ಬದುಕಲು ಕಾವ್ಯವು ಸಹಕಾರಿಯಾಗಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂಥ ಮಹಾನ್ ವ್ಯಕ್ತಿಗಳು ಸಮಾಜದ ಅನಿಷ್ಠ ಪದ್ಧತಿಯನ್ನು ದೂರಮಾಡಿ ಸಮಾನತೆಯಿಂದ ಬದುಕುವ ಮಾರ್ಗವನ್ನು ಸಾರಿದ್ದಾರೆ. ಇವರ ವಿಚಾರದಾರೆಗಳು ಸದಾ ಜೀವಂತವಾಗಿವೆ. ವ್ಯಕ್ತಿ ಪೂಜೆಗಿಂತ ಅವರ ವ್ಯಕ್ತಿತ್ವ ಹಾಗೂ ತತ್ವಗಳನ್ನು ಅನುಸರಿಸುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯ. ಮಹರ್ಷಿ ವಾಲ್ಮೀಕಿ ರಾಮಾಯಣದ ತತ್ವ ಸಿದ್ಧಾಂತಗಳನ್ನು ತಿಳಿದು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ವ್ಯಕ್ತಿಯು ಆಸ್ತಿ, ಐಶ್ವರ್ಯ, ಹಣದಿಂದ ಶೇಷ್ಠನಾಗುವುದಿಲ್ಲ. ಆತನ ಜೀವನ ಶೈಲಿ ಹಾಗೂ ವಿಚಾರಗಳು ಉತ್ತಮವಾಗಿದಲ್ಲಿ ಅವರನ್ನು ಗೌರವಿಸಿ ಶೇಷ್ಠತೆಯನ್ನು ಗಳಿಸುತ್ತಾನೆ. ಒಬ್ಬ ತಳ ಸಮುದಾಯದ ವ್ಯಕ್ತಿ ಭಾರತದ ಮಹಾನ್ ಕಾವ್ಯವನ್ನು ರಚಿಸಬೇಕಾದರೆ ಅವರ ಜೀವನ ಹಾಗೂ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಮಹರ್ಷಿ ವಾಲ್ಮಿಕಿ ಶ್ರೀ ರಾಮನ ಭಕ್ತನಾಗಿದ್ದು ಅವರ ಅನುಗ್ರಹದಿಂದ ರಾಮಾಯಣ ರಚಿಸಲಾಯಿತು ಎಂದು ಪುರಾಣಗಳು ತಿಳಿಸುತ್ತವೆ. ವಿಶ್ವವೇ ಭಕ್ತಿಯಿಂದ ಪೂಜಿಸಿ ಆರಾಧಿಸುವ ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾದ ಮಹರ್ಷಿ ವಾಲ್ಮೀಕಿಯವರ ಜೀವನ ಕ್ರಮಗಳು ಹಾಗೂ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬದುಕು ನಿರ್ವಹಿಸಲು ಸಹಕಾರಿಯಾಗುತ್ತವೆ ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ರಚಿಸಿ ದೈವ ಸ್ವರೂಪಿ ವ್ಯಕ್ತಿಯಾಗಿದ್ದಾರೆ. ಯಾವುದೇ ವ್ಯಕ್ತಿಯು ಶ್ರಮ, ಶ್ರದ್ಧೆ, ಧೈರ್ಯದಿಂದ ಎಂತಹ ಕಾರ್ಯವನ್ನು ಪೂರ್ಣಗೊಳಿಸಬಹುದು. ಆತ್ಮ ವಿಶ್ವಾಸವು ಮನುಷ್ಯನ ಅತ್ಯುತ್ತಮ ಸಂಪತ್ತು. ನಿಷ್ಠೆಯಿಂದ ಮಾಡಿದ ಪ್ರತಿ ಕೆಲಸವು ಯಶಸ್ವಿಯಾಗುತ್ತವೆ. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗಳು ಇಂತಹ ಮಹಾನ್ ಪುರುಷರ ಜೀವನ ಕ್ರಮಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರ್ಕಾರವು ದೀನ ದಲಿತರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಪ್ರಬಲರನ್ನಾಗಿಸಲು ಕ್ರಮಕೈಗೊಳ್ಳುತ್ತಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನವಂತರಾಗಬೇಕು ಎಂದು ಕರೆ ನೀಡಿದರು.
ಅಕ್ಕ ಐ.ಎ.ಎಸ್. ಅಕಾಡೆಮಿಯ ಮುಖ್ಯಸ್ಥ ಡಾ. ಶಿವಕುಮಾರ್ ಅವರು ಮಹರ್ಷಿ ವಾಲ್ಮೀಕಿ ಜೀವನ ಹಾಗೂ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾ ತಂಡಗಳೊAದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ನಗರದ ತಾಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಜಿ ಪಂ ಸಿಇಒ ಎಚ್.ಎಸ್. ಕೀರ್ತನಾ, ಎಸ್‌ಪಿ ವಿಕ್ರಮ ಅಮಟೆ, ತಹಸೀಲ್ದಾರ್ ಡಾ.ಸುಮಂತ್ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ. ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮAತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ, ಡಿಎಸ್‌ಎಸ್ ಮುಖಂಡರಾದ ಕೆ.ಟಿ.ರಾಧಕೃಷ್ಣ, ಹುಣಸೇಮಕ್ಕಿ ಲಕ್ಷö್ಮಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net