

ಮಂಡ್ಯ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಹಗರಣದ ಬಗ್ಗೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮಾತ್ರವಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ದುರ್ಬಳಕೆಯಾಗಿರುವ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಬೇಕೆಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ್ ಒತ್ತಾಯಿಸಿದ್ದಾರೆ.
ನಿಗಮದಿಂದ ಸುಮಾರು 193 ಬ್ಯಾಂಕ್ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿಯಿದೆ. ಆದ್ದರಿಂದ ಬಹುಕೋಟಿ ಹಗರಣವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಾಗೂ ಸಿಬಿಐ ಅಧಿಕಾರಿಗಳು ಹಣ ವರ್ಗಾವಣೆ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ತನಿಖಾ ಸಂಸ್ಥೆಗಳು ಕ್ರಮ ವಹಿಸಬೇಕು. ದುರ್ಬಳಕೆಯಾಗಿರುವ ಹಣವನ್ನು ವಸೂಲಿ ಮಾಡಿ, ವಾಪಸ್ ನಿಗಮಕ್ಕೆ ಕಟ್ಟಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ನಾಯಕ ಸಮುದಾಯ ಮತ್ತು ಪರಿಶಿಷ್ಟ ಪಂಗಡದ ಎಲ್ಲ ಸಮುದಾಯದವರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಅರಕೇಶ್, ಉಪಾಧ್ಯಕ್ಷ ಪುಟ್ಟಸ್ವಾಮಿನಾಯಕ್, ಖಜಾಂಚಿ ಕೆ.ಪ್ರಮೀಳಾ, ಪಾಪಣ್ಣ, ಲೋಕೇಶ್, ಶ್ರೀನಿವಾಸ್ ಹಾಜರಿದ್ದರು.