

ಭಾಲ್ಕಿ: ಆದಿಕವಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಮೂಲಕ ಆದರ್ಶ ಕುಟುಂಬ, ಸಮಾಜ, ರಾಜ್ಯ ನಿರ್ಮಾಣ ಮಾಡಬಹುದು. ಹಾಗಾಗಿ ರಾಮಾಯಣ ಸರ್ವ ಸಮಸ್ಯೆಗಳಿಗೆ ದಿವೌಷಧವಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಕುಟುಂಬದ ಸದಸ್ಯರಲ್ಲಿ ವೈಮನಸ್ಸು ಹೆಚ್ಚಾಗಲು ನಮ್ಮಲ್ಲಿನ ಸಂಕುಚಿತ ಭಾವನೆಯೇ ಕಾರಣ. ಮನುಷ್ಯ ಜೀವನದ ಮುಖ್ಯ ಉದ್ದೇಶ ಆನಂದ ಮತ್ತು ಸಮಾಧಾನದ ಬದುಕು ಸಾಗಿಸುವುದು. ವಿವಿಧ ಧರ್ಮ, ಜಾತಿಗಳಿಂದ ಕೂಡಿದ ಸಮಾಜವಿದ್ದರೂ ನೆಮ್ಮದಿಯ ಬದುಕಿಗಾಗಿ ಎಲ್ಲರೂ ಸತ್ಯ, ಅಹಿಂಸೆ, ಪ್ರೀತಿ, ವಾತ್ಸಲ್ಯಕ್ಕೆ ಪ್ರಾಧಾನ್ಯತೆ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಬಹು ದಿನದ ಬೇಡಿಕೆಯಾದ ಸಮುದಾಯ ಭವನ ನಿರ್ಮಿಸಲು ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಸಮಾಜದ ಮುಖಂಡರಾದ ಅರ್ಜುನ ಜಮಾದಾರ ಮತ್ತು ವಿಶ್ವನಾಥ ಬಳಕಟ್ಟೆ ಮಾತನಾಡಿ ವಾಲ್ಮೀಕಿ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ,ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಪಂ ಇಒ ಸೂರ್ಯಕಾಂತ ಬಿರಾದಾರ, ಸೋಮನಾಥಪ್ಪ ಅಷ್ಟೂರೆ, ಪುರಸಭೆ ಸದಸ್ಯರಾದ ಲಕ್ಮೀಬಾಯಿ ಶಿವರಾಜ, ಮಹಬೂಬ್, ನಗರ ಠಾಣೆ ಸಿಪಿಐ ಅಂಬರೀಷ ಬಿ., ಅಧಿಕಾರಿಗಳಾದ ಸಂಗಮೇಶ ಕಾರಬಾರಿ, ಮಲ್ಲಿಕಾರ್ಜುನ ಬಿರಾದಾರ, ಶ್ರೀನಿವಾಸ, ವಿಜಯಲಕ್ಷ್ಮೀ, ಮಮತಾಜ, ಅಮರ ಪಾಟೀಲ್, ಜ್ಞಾನೇಶ್ವರ ಕಾರಬಾರಿ ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಎಡಿ ಸತೀಶಕುಮಾರ ಸಂಗನ ಸ್ವಾಗತಿಸಿದರು. ಪತ್ರಕರ್ತ ದೀಪಕ ಥಮಕೆ ನಿರೂಪಣೆ ಮಾಡಿದರು. ಬಿಆರ್‌ಸಿ ಸಮನ್ವಯಧಿಕಾರಿ ಮನೋಹರ ಹೋಳ್ಕರ್ ವಂದಿಸಿದರು.